ಮಡಿಕೇರಿ, ಏ. ೨೫: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರುನಾಣಿ, ಬಾಡಗರಕೇರಿ, ಪೊರಾಡ್, ತೆರಾಲು ಹಾಗೂ ಪರಕಟಗೇರಿ (ಪೂಕಳ) ಗ್ರಾಮಗಳನ್ನು ಒಳಗೊಂಡAತೆ ಬರುವ ಮರೆನಾಡ್ ವ್ಯಾಪ್ತಿಯ ಕೊಡವ ಕುಟುಂಬಗಳ ‘ಮರೆನಾಡ್ ಕೊಡವ ಕಪ್ ಕ್ರಿಕೆಟ್ - ೨೦೨೨’ ಪಂದ್ಯಾವಳಿ ತಾ. ೨೮ ರಿಂದ ೩೦ರವೆಗೆ ಜರುಗಲಿದೆ.
ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ಜರುಗಲಿರುವ ಪಂದ್ಯಾವಳಿಯಲ್ಲಿ ೧೫ ಕುಟುಂಬಗಳು ಭಾಗಿಯಾಗಲಿವೆ. ೨೦೧೯ರಲ್ಲಿ ಈ ಪಂದ್ಯಾವಳಿಯನ್ನು ಪ್ರಾರಂಭಿಸಲಾಗಿದ್ದು, ನಂತರ ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಇದಕ್ಕೆ ಮರುಚಾಲನೆ ನೀಡಲಾಗುತ್ತಿದೆ. ಈ ವ್ಯಾಪ್ತಿಯ ವಿವಿಧ ಕುಟುಂಬಗಳನ್ನು ಒಳಗೊಂಡ ಉತ್ಸಾಹಿ ಯುವಕರು ಈ ಪಂದ್ಯಾವಳಿಯನ್ನು ಆಯೋಜಿ ಸುತ್ತಿದ್ದಾರೆ.
ಪಂದ್ಯಾವಳಿಗೆ ಸಿದ್ಧತೆ ನಡೆದಿದ್ದು, ಮೈದಾನಕ್ಕೆ ಕರ್ನಾಟಕ ರಣಜಿ ತಂಡದ ಆಟಗಾರರಾಗಿರುವ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರು ಭೇಟಿ ನೀಡಿದ್ದರು. ಪಂದ್ಯಾಟಕ್ಕೆ ತಾಲೀಮು ನಡೆಸುತ್ತಿದ್ದ ಆಟಗಾರರೊಂದಿಗೆ ಸ್ವತಃ ಆಟವನ್ನಾಡಿದ ವಿದ್ವತ್ ಕಾವೇರಪ್ಪ ಅವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಟಕರು ಹಾಗೂ ಆಟಗಾರರನ್ನು ಅವರು ಈ ಸಂದರ್ಭ ಉತ್ತೇಜಿಸಿದರು.
ತಾ. ೨೮ ರಿಂದ ಮೂರು ದಿನಗಳ ಕಾಲ ಪಂದ್ಯಾವಳಿ ಜರುಗಲಿದ್ದು, ತಾ. ೩೦ ರಂದು ಅಂತಿಮ ಪಂದ್ಯ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅದೇ ದಿನ ಸಂಜೆ ಕೊಡವ ಸಿನಿಮಾ ‘ನೆಲ್ಚಿಬೊಳಿ’ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಕೀಕಣಮಾಡ ಮನು ಹಾಗೂ ಕಳಕಂಡ ಜಿತು ಅವರುಗಳು ತಿಳಿಸಿದ್ದಾರೆ.