ಸೋಮವಾರಪೇಟೆ, ಏ.೨೫: ಜಿಲ್ಲೆಯಲ್ಲಿಯೇ ಪ್ರಥಮವಾಗಿ ನಿರ್ಮಾಣಗೊಂಡಿರುವ, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಕಾಜೂರು ಗ್ರಾಮದ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕ್ಷೇತ್ರದ ತಂತ್ರಿಗಳಾದ ಚಾಲಕ್ಕುನ್ನತ್ತಿಲ್ಲಂ ಗೋಪಾಲಕೃಷ್ಣ ನಂಬೂದರಿಯವರ ನೇತೃತ್ವದಲ್ಲಿ ಶ್ರೀ ಚೆನ್ನಿಗರಾಯಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬ್ರಹ್ಮಕಲಶೋತ್ಸವ ಕಾರ್ಯವನ್ನು ನೆರವೇರಿಸಲಾಯಿತು.
ನಿನ್ನೆಯಿಂದಲೇ ಆರಂಭಗೊAಡ ಪೂಜಾ ವಿಧಿವಿಧಾನಗಳು, ಹೇರಂಭ ಗಣಪತಿ ಹೋಮ, ಅಂಕುರ ಪೂಜೆ, ಏಕಾಕ್ಷರಿ ಗೋಪಾಲ ಹೋಮ, ಪ್ರತಿಷ್ಠ ಹೋಮ, ಪ್ರತಿಷ್ಠ ಕಲಶ, ಬ್ರಹ್ಮ ಕಲಶ ಪೂಜೆ, ಆಧಿವಾಸ ಹೋಮ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಮಹಾಪೂಜೆ ಸೇರಿದಂತೆ ಮಹಾಮಂಗಳಾರತಿಯೊAದಿಗೆ ಸಮಾಪ್ತಿಯಾಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಾರನ ಅಪ್ಪಾಜಿ, ಕಾರ್ಯದರ್ಶಿ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ, ಖಜಾಂಚಿ ಬಾರನ ರವಿ ಸೇರಿದಂತೆ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.