ಮಡಿಕೇರಿ, ಏ. ೨೫: ಅಭಿವೃದ್ಧಿ ಕಾಮಗಾರಿಗೆ ಮಣ್ಣು ಬಳಕೆ ಸಂಬAಧ ಮದೆನಾಡು ಗ್ರಾಮ ಪಂಚಾಯ್ತಿ ಸದಸ್ಯೆ ನವೀನಾ ಎಂಬವರು ಗುತ್ತಿಗೆ ಪಡೆದ ಸಂಸ್ಥೆ ಸಿಬ್ಬಂದಿ ಬಳಿ ರೂ. ೧ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬAಧ ವರದಿ ನೀಡಲು ಮಡಿಕೇರಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಸೂಚಿಸಿದ್ದಾರೆ.

ಕಳೆದ ೨ ದಿನಗಳ ಹಿಂದೆ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ತಾ. ೨೫ ರಂದು ಶಕ್ತಿ ದಿನಪತ್ರಿಕೆಯಲ್ಲಿ ಈ ಬಗ್ಗೆ ವಿಸ್ತçತ ವರದಿ ಕೂಡ ಪ್ರಕಟಗೊಂಡಿತ್ತು. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿ.ಪಂ.ಸಿಇಓ ಭಂವರ್ ಸಿಂಗ್ ಮೀನಾ ಅವರು, ತಾ.ಪಂ. ಇಓ ಶೇಖರ್ ಅವರಿಗೆ ಸಮಗ್ರ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಇದರ ತನಿಖೆಯನ್ನು ಜಿ.ಪಂ. ಪ್ರಾದೇಶಿಕ ಆಯುಕ್ತರು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯಿಸಿರುವ ಸಿಇಓ, ಈ ಪ್ರಕರಣಕ್ಕೆ ಸಂಬAಧಿಸಿದ ಆಡಿಯೋ ತುಣುಕುಗಳು ಲಭ್ಯವಾಗಿವೆ. ವರದಿ ಬಂದ ಬಳಿಕ ತನಿಖೆ ಕೈಗೊಳ್ಳಲಾಗುವುದು. ಪಂಚಾಯತ್ ರಾಜ್ ಕಾಯಿದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗುತ್ತಿಗೆದಾರರು ದೂರು ನೀಡಿದ್ದಲ್ಲಿ ಪ್ರಕರಣ ಮತ್ತಷ್ಟು ಗಂಭೀರವಾಗುತ್ತದೆ. ಇದಕ್ಕೂ ಅವಕಾಶವಿದೆ. ದೂರು ನೀಡಲು ಮುಂದೆ ಬರಬಹುದು ಎಂದು ತಿಳಿಸಿದ್ದಾರೆ.

ತಾ.ಪಂ. ಇಓ ಶೇಖರ್ ಈ ಬಗ್ಗೆ ಮಾತನಾಡಿ, ತಾ.ಪಂ. ಅಧಿಕಾರಿಗಳ ತಂಡ ಈ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿ ವರದಿ ತಯಾರಿಸುತ್ತಿದೆ. ಇದನ್ನು ಸಿಇಓ ಅವರಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪಕ್ಷದಿಂದ ಉಚ್ಚಾಟನೆ: ಮಾತನಾಡುವ ಸಂದರ್ಭ ಗ್ರಾ.ಪಂ. ಸದಸ್ಯೆ ಶಾಸಕರ ಹಾಗೂ ಬಿಜೆಪಿ ಪಕ್ಷದ ಹೆಸರು ಬಳಸಿ ಚ್ಯುತಿ ತಂದ ಹಿನ್ನೆಲೆ ಮದೆನಾಡು ಶಕ್ತಿ ಕೇಂದ್ರ ಸಭೆ ನಡೆಸಿ ಪಕ್ಷದಿಂದ ಉಚ್ಚಾಟನೆ ಮಾಡಲು ನಿರ್ಧರಿಸಿದೆ.

ಗ್ರಾ.ಪಂ. ಸದಸ್ಯ ಸ್ಥಾನ ಅನರ್ಹಕ್ಕೆ ಒತ್ತಾಯಿಸಿದೆ ಎಂದು ಪ್ರಮುಖರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಡಿಕೇರಿಯ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಸದಸ್ಯ ಸ್ಥಾನ ಅನರ್ಹಕ್ಕೆ ತಾ.ಪಂ. ಇಓ ಶೇಖರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಬೆಳ್ಯನ ಚಂದ್ರ ಪ್ರಕಾಶ್, ಸಹ ಪ್ರಮುಖ ಬೊಮ್ಮುಡಿರ ತನೋಜ್, ತಾ.ಪಂ. ಮಾಜಿ ಸದಸ್ಯ ಕೊಡಪಾಲು ಗಣಪತಿ, ಪ್ರಮುಖರಾದ ಕಿಮ್ಮುಡಿರ ಜಗದೀಶ್, ಪೊನ್ನೇಟಿ ನಂದ, ಚೆರಿಯಮನೆ ಆನಂದ್, ಪೊನ್ನೇಟಿ ನಿತ್ಯಕುಮಾರ್ ಮದೆನಾಡು ಬೂತ್ ಅಧ್ಯಕ್ಷ ಕಾಯರ್‌ಮಾಡ್ ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.

-ಹೆಚ್.ಜೆ. ರಾಕೇಶ್