*ಸಿದ್ದಾಪುರ ಏ. ೨೨: ಜಿಲ್ಲಾದ್ಯಂತ ಹಲವಾರು ಖಾಸಗಿ ಶಾಲಾ ಶಿಕ್ಷಕರಿಗೆ ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಸಂಬಳ ನೀಡಲಾಗುತ್ತಿಲ್ಲ. ಆದರೆ ಬಹುತೇಕ ಶಾಲಾ ವಿದ್ಯಾರ್ಥಿಗಳು ತಮ್ಮ ವಾರ್ಷಿಕವಾಗಿ ನೀಡ ಬೇಕಾಗಿದ್ದ ಹಣವನ್ನು ಪಾವತಿಸಿ ಆಗಿದೆ. ಕೋವಿಡ್ ರೋಗ ಪಸರಿಸುವಿಕೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿ ಆನ್‌ಲೈನ್ ಪಾಠ ತರಬೇತಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಲೆಗಳಿಗೆ ಮಕ್ಕಳು ಬೌಧಿಕವಾಗಿ ಹಾಜರಾದ ಬಳಿಕ ಶಿಕ್ಷಕರ ಸಂಬಳದ ಉಳಿದ ಹಣವನ್ನು ನೀಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿಗಳು ಭರವಸೆ ನೀಡಿತ್ತು. ಆಡಳಿತ ಮಂಡಳಿಯು ನೀಡಿದ ಭರವಸೆ ಮೇರೆಗೆ ಶಿಕ್ಷಕರು ತಮ್ಮ ವೃತ್ತಿಯನ್ನು ಮುಂದುವರೆಸಿದ್ದರೂ ಬಹುತೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಉಳಿಕೆ ಹಣವನ್ನು ನೀಡಲಾಗುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರ ಮಾಸಿಕ ವೇತನ ಎಷ್ಟೆಂದು ಕೇಳಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ, ಇದು ಇತರ ಯಾವುದೇ ಕೂಲಿ ಕಾರ್ಮಿಕರಿಗೆ ನೀಡಲಾಗುವ ಸಂಬಳಕ್ಕಿAತಲೂ ಕಡಿಮೆ ಇದೆ ಎಂದು ಸಿದ್ದಾಪುರದ ಶಿಕ್ಷಕಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಶಿಕ್ಷಕ ವೃತ್ತಿ ಆರಂಭಿಸುವ ಸಂದರ್ಭದಲ್ಲಿ ಸರಕಾರಿ ಹುದ್ದೆ ಲಭಿಸುವವರೆಗೂ ಅನುಭವ ದೊರಕಲಿ ಎಂದು ಖಾಸಗಿ ಸಂಸ್ಥೆಗೆ ಅಧ್ಯಾಪಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದು ಈಗ ಶಾಪವಾಗಿ ಪರಿಣಮಿಸಿದೆ. ವಯಸ್ಸು ಮೀರುತ್ತಿದ್ದಂತೆ ಸರಕಾರಿ ಕೆಲಸ ಬಯಸುವ ಹಂಬಲ ಹೆಚ್ಚಾಗುತ್ತಲೇ ಬಂತು; ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಭರವಸೆಯ ಮಾತುಗಳು ನಮ್ಮನ್ನು ಭ್ರಮಾ ಲೋಕದಲ್ಲಿ ತೇಲಾಡಿಸಿದವು. ‘‘ಮುಂದಿನ ಪ್ರಿನ್ಸಿಪಾಲರು ನೀವೇ, ಸಂಬಳ ಹೆಚ್ಚಾಗುತ್ತದೆ, ವಾಸಿಸಲು ಮನೆ, ಕಾರು ಮಕ್ಕಳಿಗೂ ಇದೇ ಶಾಲೆಯಲ್ಲಿ ಉಚಿತ ಶಿಕ್ಷಣ’’ ಹೀಗೆಲ್ಲಾ ಮಾತನಾಡುವುದನ್ನು ಕೇಳುತ್ತಲೇ ನನ್ನ ವಯಸ್ಸು ೩೫ ಮೀರಿ ಹೋಗಿತ್ತು. ವಯಸ್ಸು ಮೀರುತ್ತಿದ್ದಂತೆ ಒರಟು ಮಾತುಗಳು, ಹೆಚ್ಚುವರಿ ಕೆಲಸ ಒತ್ತಡ ಎಲ್ಲವೂ ಹೆಚ್ಚಾಗುತ್ತದೆ, ಇದು ನಮ್ಮನ್ನು ತಿರಸ್ಕರಿಸುವ ತಂತ್ರಗಾರಿಕೆ ಎಂದು ನಮಗೆ ತಿಳಿದಿದ್ದರೂ ನಾವುಗಳು ನಿಸ್ಸಹಾಯಕರಾಗಿದ್ದೇವೆ. ಇದು ಅಮ್ಮತ್ತಿಯ ಶಾಲಾ ಶಿಕ್ಷಕರೊಬ್ಬರ ನೋವಿನ ಸಾಲುಗಳು. ಪ್ರತಿಭಟನೆ ಮಾಡಲು ಮನಸ್ಸು ಒಪ್ಪುತ್ತಿಲ್ಲ, ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ಸರಕಾರದ ಸೌಲಭ್ಯಗಳೂ ದೂರವಾಗಿದೆ. ನಮ್ಮ ನೋವನ್ನು ಹೇಳಿಕೊಳ್ಳಲು ಸೂಕ್ತ ವೇದಿಕೆಯೇ ಇಲ್ಲದಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರವೊಂದರ ಯಥಾ ನಕಲನ್ನು ನಮ್ಮ ಶಾಲೆಯ ಆಡಳಿತ ಮಂಡಳಿಗೆ ಕಳುಹಿಸಲಾಗಿತ್ತು. ಅದರಿಂದ ನಾವು ಸಹಿಸಿದ ನೋವು ಹೇಳತೀರದು, ಅಸಹನೀಯ ವಾತಾವರಣದಲ್ಲಿ ವೃತ್ತಿ ಮುಂದುವರಿಸಲು ಸಾದ್ಯವಾಗದೆ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಹೊರಗೆ ಬರಬೇಕಾಯಿತು. ಬದುಕು ಸಾಗಿಸುವ ಉದ್ದೇಶದಿಂದ ಅಂಗಡಿಯೊAದರಲ್ಲಿ ಕೆಲಸಕ್ಕೆ ಸೇರಿದ್ದೇನೆ, ಶಾಲಾ ಸಂಬಳಕ್ಕಿAತ ದುಪ್ಪಟ್ಟು ಹಣ ಕೈ ಸೇರುತ್ತಿದೆ, ನೆಮ್ಮದಿಯೂ ಇದೆ ಆದರೆ ಶಿಕ್ಷಕಳಾಗಿದ್ದಾಗ ದೊರಕುತ್ತಿದ್ದ ಗೌರವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುವುದು ಅಧ್ಯಾಪಕಿಯೊಬ್ಬರ ಮನದಾಳದ ಮಾತು. ಶಾಲೆಗಳು ಬೇಸಿಗೆಯ ರಜೆ ಘೋಷಣೆ ಮಾಡುವ ತವಕದಲ್ಲಿದೆ, ಶಾಲೆ ನಡೆಸಲು ಹಣವಿಲ್ಲ ಎನ್ನುತಿದ್ದ ಬಹುತೇಕ ಶಾಲಾ ಕಟ್ಟಡಗಳನ್ನು ದುರಸ್ಥಿ ಪಡಿಸಲಾಗಿದೆ, ನೂತನ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿವೆ. ಸುಣ್ಣ ಬಣ್ಣಗಳೂ ರಂಗೇರಿದೆ, ಆದರೂ ಶಿಕ್ಷಕರಿಗೆ ಸಂಬಳ ನೀಡಲು ಮುಂದಾಗುತ್ತಿಲ್ಲ ಎಂಬುವುದು ವಿಪರ್ಯಾಸವೇ ಸರಿ, ಏಕೆ ಇಷ್ಟೊಂದು ಮಲತಾಯಿ ಧೋರಣೆ ಅರ್ಥವಾಗುತ್ತಿಲ್ಲ ದಯವಿಟ್ಟು ಇನ್ನಾದರೂ ಉಳಿಕೆ ಹಣವನ್ನು ಪಾವತಿಸಬಾರದೆ ಎಂಬುವುದು ಮೇಸ್ಟರೊಬ್ಬರ ಅಭಿಪ್ರಾಯ.

-ಅಂಚೆಮನೆ ಸುಧಿ