ಮಡಿಕೇರಿ, ಏ. ೨೨: ರಾಜ್ಯದಲ್ಲಿ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತ್ನ ಈ ಹಿಂದಿನ ಆಡಳಿತಾವಧಿ ಮುಕ್ತಾಯಗೊಂಡು ಇದೇ ಏಪ್ರಿಲ್ ಅಂತ್ಯಕ್ಕೆ ವರ್ಷಪೂರ್ಣಗೊಳ್ಳುತ್ತಿದೆ.
ಪ್ರತಿನಿಧಿಗಳಿಲ್ಲದೆ ಒಂದು ವರ್ಷದ ಅವಧಿ ಕಳೆದಿರುವುದು ಒಂದೆಡೆಯಾದರೆ ಸದ್ಯಕ್ಕಂತೂ ಈ ಚುನಾವಣೆ ನಡೆಯುವ ಸಾಧ್ಯತೆ ಬಹುತೇಕ ಇಲ್ಲವೇ ಇಲ್ಲ. ೨೦೧೬ರ ಫೆಬ್ರವರಿಯಲ್ಲಿ ಜಿ.ಪಂ. - ತಾ.ಪಂ. ಚುನಾವಣೆ ನಡೆದಿದ್ದು, ಏಪ್ರಿಲ್ ಅಂತ್ಯದಲ್ಲಿ ಹಾಗೂ ಮೇ ಮೊದಲ ವಾರದಲ್ಲಿ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಂಡು ಆಡಳಿತ ಮಂಡಳಿ ರಚನೆಯಾಗಿತ್ತು. ನಂತರದಲ್ಲಿ ಕಳೆದ ವರ್ಷಕ್ಕೆ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿದ್ದು, ಎಲ್ಲಾ ಚುನಾಯಿತ ಪ್ರತಿನಿಧಿಗಳು ಮಾಜಿಗಳಾಗಿದ್ದಾರೆ. ಇದಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.
ಮುಂದಿನ ಚುನಾವಣೆಗೆ ಸಿದ್ಧತೆ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆದಿತ್ತಾದರೂ ರಾಜ್ಯದಲ್ಲಿ ಹೊಸದಾಗಿ ಕೆಲವು ತಾಲೂಕುಗಳ ರಚನೆಯಾಗಿದ್ದರಿಂದ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಷನ್) ಹಾಗೂ ಮೀಸಲಾತಿ ನಿಗದಿ ವಿಚಾರದಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿದವು.
ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗ ಹಾಗೂ ಸರಕಾರದ ನಡುವಿನ ಭಿನ್ನ ನಿಲುವಿನಿಂದಾಗಿ ಈ ವಿಚಾರ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಚುನಾವಣಾ ಆಯೋಗದ ಮೂಲಕ ಸಿದ್ಧಪಡಿಸಲಾಗಿದ್ದ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ರಾಜ್ಯ ಸರಕಾರ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ಮಾಡಿ ಚುನಾವಣಾ ಆಯೋಗದ ಬದಲಿಗೆ ಸರಕಾರದ ಮೂಲಕವೇ ಇದನ್ನು ಸಿದ್ಧಪಡಿಸಲಾಗುವುದು ಎಂಬ ನಿಲುವುವನ್ನು ಪ್ರಕಟಿಸಿತ್ತಲ್ಲದೆ, ಇದಕ್ಕೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿ ರಚಿಸಿತ್ತು. ಅದಾಗಲೇ ಚುನಾವಣಾ ಆಯೋಗ ಕರಡು ಪಟ್ಟಿಯನ್ನು ಸಿದ್ಧಪಡಿಸಿದ್ದು, ಆಕ್ಷೇಪಣೆ ಸ್ವೀಕಾರದ ಹಂತಕ್ಕೆ ಬಂದಿತ್ತು. ಇದರಿಂದಾಗಿ ಚುನಾವಣಾ ಆಯೋಗ ಸರಕಾರದ ನಿಲುವಿನ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇದು ಇನ್ನೂ ವಿಚಾರಣಾ ಹಂತದಲ್ಲೇ ಬಾಕಿ ಉಳಿದಿದೆ.
ಸರಕಾರ ನಿವೃತ್ತ ಐಎಎಸ್ ಅಧಿಕಾರಿ ಲಕ್ಷಿö್ಮನಾರಾಯಣ್ ಅಧ್ಯಕ್ಷತೆಯ ಆಯೋಗ ರಚಿಸಿದ್ದು, ಈ ಆಯೋಗವೂ ಜಿಲ್ಲಾಡಳಿತದಿಂದ ವರದಿ ಕೇಳಿದ್ದು, ವರದಿ ನೀಡಲಾಗಿತ್ತು. ಆದರೆ ಇಷ್ಟೇ ಪ್ರಕ್ರಿಯೆಯ ಹಂತದಲ್ಲಿ ಈ ವಿಚಾರ ಇನ್ನೂ ನಿಂತ ನೀರಾಗಿದೆ. ಇದೀಗ ಮುಂದಿನ ಮೇ ತಿಂಗಳಿಗೆ ಪ್ರಸ್ತುತ ಆಡಳಿತದಲ್ಲಿರುವ ಸರಕಾರದ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ರಾಜ್ಯ ವಿಧಾನ ಸಭೆಗೂ ಚುನಾವಣೆ ನಡೆಯಬೇಕಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಕರಣ ಇನ್ನೂ ಅಂತಿಮ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆ ಮುಗಿಯುವ ತನಕವೂ ಜಿ.ಪಂ. - ತಾ.ಪಂ. ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಇದೆ.
ಇದರ ನಡುವೆ ಮಳೆಗಾಲವೂ ಎದುರಾಗಲಿದೆ ಅಲ್ಲದೆ ಪ್ರಕರಣ ಇತ್ಯರ್ಥವಾದರೂ ಮತ್ತೆ ಸಿದ್ಧತೆಗೆ ಎರಡು - ಮೂರು
(ಮೊದಲ ಪುಟದಿಂದ) ತಿಂಗಳ ಕಾಲಾವಕಾಶಬೇಕಾಗುತ್ತದೆ. ಈ ಕಾರಣ ಒಂದೆಡೆಯಾದರೆ, ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಕೂಡ ವಿಧಾನಸಭಾ ಚುನಾವಣೆಗೆ ಮುನ್ನ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯತ್ತ ಆಸಕ್ತಿ ತೋರಲಾರರು. ಏಕೆಂದರೆ ಜಿ.ಪಂ. - ತಾ.ಪಂ. ಚುನಾವಣೆಗೆ ಆಸಕ್ತಿ ಹೊಂದಿರುವ ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಒಂದು ವೇಳೆ ಈ ಚುನಾವಣೆ ಮುಗಿದು ಹೋದ ಪಕ್ಷದಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳಿAದ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕವೂ ಸಹಜವಾಗಿಯೇ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮತ್ತೂ ಒಂದೂವರೆ ವರ್ಷ ಜಿ.ಪಂ. - ತಾ.ಪಂ. ಚುನಾವಣೆ ನಡೆಯುವ ಸಾಧ್ಯತೆ ಬಹುತೇಕ ಇಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದು ಸದ್ಯದ ವಾಸ್ತವವೂ ಆಗಿದೆ.