ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಭಾರತ-ಬ್ರಿಟನ್ ನಿರ್ಧಾರ
ನವದೆಹಲಿ, ಏ. ೨೨: ಕ್ಷಿಪ್ರ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ಹೊಸ ಮತ್ತು ವಿಸ್ತರಿತ ಭಾರತ-ಯುಕೆ ರಕ್ಷಣಾ ಪಾಲುದಾರಿಕೆ ಒಪ್ಪಿಕೊಂಡಿದ್ದು, ವರ್ಷಾಂತ್ಯದೊಳಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಭಾರತ ಭೇಟಿಯ ಎರಡನೇ ಮತ್ತು ಅಂತಿಮ ದಿನದಂದು ಪ್ರಧಾನಿ ಮೋದಿ ಅವರೊಂದಿಗಿನ ವ್ಯಾಪಕ ಮಾತುಕತೆಯ ನಂತರ ರಕ್ಷಣಾ ಉತ್ಪನ್ನ ಖರೀದಿಗಾಗಿ ಅಧಿಕಾರಶಾಹಿ ಹಸ್ತಕ್ಷೇಪ ಮತ್ತು ಪೂರೈಕೆ ಸಮಯವನ್ನು ಕಡಿತಗೊಳಿಸಲು ಬ್ರಿಟನ್ ಭಾರತಕ್ಕಾಗಿ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿಯನ್ನು ರಚಿಸುತ್ತಿದೆ ಎಂದು ಬೋರಿಸ್ ಜಾನ್ಸನ್ ಅವರು ಹೇಳಿದ್ದಾರೆ. ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ ಒದಗಿಸಲಿದ್ದು, ಇದರಿಂದ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿಮೆಯಾಗಲಿದೆ. ಭೂಮಿ, ಸಮುದ್ರ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ಸೇರಿದಂತೆ ಐದು ವಲಯಗಳಲ್ಲಿನ ಭದ್ರತೆಗೆ ಸಂಬAಧಿಸಿದ ಹೊಸ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿವೆ. ಹಿಂದೂ ಮಹಾ ಸಾಗರದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ಹತ್ತಿಕ್ಕಲು ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್ ಪ್ರಧಾನಿ ಹೇಳಿದ್ದಾರೆ. ಇಂದು, ನಾವು ಹೊಸ ಮತ್ತು ವಿಸ್ತರಿತ ರಕ್ಷಣಾ ಹಾಗೂ ಭದ್ರತಾ ಪಾಲುದಾರಿಕೆಯನ್ನು ಒಪ್ಪಿಕೊಂಡಿದ್ದೇವೆ. ಭಾರತ ಮತ್ತು ಇಂಗ್ಲೆAಡ್ ನಡುವೆ ಹಿಂದೆAದಿಗಿAತಲೂ ಈಗ ಸಂಬAಧ ಉತ್ತಮವಾಗಿದೆ. ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ(ರಕ್ಷಣೆಯಲ್ಲಿ)ಅನ್ನು ಬೆಂಬಲಿಸಲು ದಶಕಗಳ ಬದ್ಧತೆಯನ್ನು ಹೊಂದಿದ್ದೇವೆ ಎಂದು ಬೋರಿಸ್ ಜಾನ್ಸನ್ ಹೇಳಿದರು. ಮುಕ್ತ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿದ ಬ್ರಿಟನ್ ಪ್ರಧಾನಿ, ಅಕ್ಟೋಬರ್‌ನಲ್ಲಿ ದೀಪಾವಳಿಗೂ ಮುನ್ನ ಈ ಒಪ್ಪಂದವನ್ನು ಪೂರ್ಣಗೊಳಿಸಲು ಎರಡೂ ಕಡೆಯ ಸಮಾಲೋಚಕರು ಬಯಸುತ್ತಾರೆ ಎಂದು ತಿಳಿಸಿದರು.
ಕೊರೊನಾ ಹೆಚ್ಚಳ: ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು
ಚೆನ್ನೆöÊ, ಏ. ೨೨: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ನಂತರ ಈಗ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯ ಗೊಳಿಸಿದೆ. ಈ ಸಂಬAಧ ಶುಕ್ರವಾರ ಆದೇಶ ಹೊರಡಿಸಿರುವ ತಮಿಳುನಾಡು ಸರ್ಕಾರ ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘಿಸಿದರೆ ೫೦೦ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ದೇಶದಲ್ಲಿ, ವಿಶೇಷವಾಗಿ ರಾಷ್ಟç ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್-೧೯ ಪ್ರಕರಣಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ಕೂಡ ಕಳೆದೆರಡು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಮಿಳುನಾಡಿನಲ್ಲಿ ಗುರುವಾರ ೩೯ ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದರೆ, ಹಿಂದಿನ ದಿನ ೩೧ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಇಳಿಮುಖವಾದ ನಂತರ ಆರೋಗ್ಯ ಇಲಾಖೆಯು ಈ ಹಿಂದೆ ಹೊರಡಿಸಿದ್ದ ಮಾಸ್ಕ್ ಕಡ್ಡಾಯ ಆದೇಶವನ್ನು ಹಿಂಪಡೆದಿತ್ತು.
ಜಮ್ಮು ಎನ್‌ಕೌಂಟರ್: ಗುಂಡಿನ ಚಕಮಕಿಯಲ್ಲಿ ಸಿಲುಕಿದ ಕುಟುಂಬ
ಜಲಾಲಾಬಾದ್, ಏ. ೨೨: ಜಮ್ಮು ಮತ್ತು ಕಾಶ್ಮೀರದ ಜಲಾಲಾಬಾದ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ತೀವ್ರ ಅಪಾಯಕ್ಕೆ ಸಿಲುಕಿದ್ದ ಕುಟುಂಬವನ್ನು ಭಾರತೀಯ ಸೇನೆ ರಕ್ಷಿಸಿದೆ. ನಾವು ಮತ್ತೆ ಒಬ್ಬರನ್ನೊಬ್ಬರು ನೋಡುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ನಾವು ಇರುವ ಸ್ಥಳದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಗ್ರೆನೇಡ್ ಸ್ಫೋಟಗಳು ಸಂಭವಿಸಿವೆ. ನಾವು ಜೀವಂತವಾಗಿ ಉಳಿಯುವುದಿಲ್ಲ ಎಂದು ಭಾವಿಸಿದ್ದೇವು. ಆದರೆ ಸೇನೆ ಸಕಾಲದಲ್ಲಿ ಸ್ಪಂದಿಸಿ ನಮ್ಮನ್ನು ರಕ್ಷಿಸಿತು ಎಂದು ಅಲ್ಲಿನ ನಿವಾಸಿ ೩೪ ವರ್ಷದ ಜುಲ್ಫಿಕರ್ ಅಲಿ ಅವರು ಹೇಳಿದ್ದಾರೆ. ನಮ್ಮ ಮನೆಯ ಹೊರಗೆ ಗುಂಡಿನ ದಾಳಿ ನಡೆಯುತ್ತಿತ್ತು. ಗೋಡೆಗಳಿಗೆ ಮತ್ತು ಹೊರಗಿಂದ ವಾಹನಗಳ ಮೇಲೆ ಉಗ್ರರು ಗುಂಡು ಹಾರಿಸುತ್ತಿದ್ದಾಗ ನಮ್ಮ ಕುಟುಂಬ ಮನೆಯ ಒಂದು ಮೂಲೆಯಲ್ಲಿ ಅಡಗಿಕೊಂಡಿತ್ತು. ಈ ಭಯಾನಕ ಪರಿಸ್ಥಿತಿಯ ನಡುವೆಯೇ ಸೇನೆಯ ತಂಡವೊAದು ಮನೆಯೊಳಗೆ ಪ್ರವೇಶಿಸಿತು ಮತ್ತು ಭಾರೀ ರಕ್ಷಣೆಯಲ್ಲಿ ಪ್ರತಿಯೊಬ್ಬರನ್ನು ರಕ್ಷಿಸಿತು ಎಂದು ಅಲಿ ವಿವರಿಸಿದ್ದಾರೆ. ಸೇನೆ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ ಮತ್ತು ನಾವು ಇಂದು ಜೀವಂತವಾಗಿದ್ದೇವೆ ಎಂದು ಅಲಿ ಹೇಳಿದ್ದಾರೆ. ಜನನಿಬಿಡ ಜಲಾಲಾಬಾದ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ೪ ಗಂಟೆಯ ನಂತರ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಕಾಳಗದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿ ಹಿಂಸಾಚಾರದ ಹಿಂದೆ ಹಲವು ಕಾಣದ ಕೈಗಳಿವೆ: ಗೃಹ ಸಚಿವ ಅರಗ ಜ್ಞಾನೇಂದ್ರ
ಬೆAಗಳೂರು, ಏ. ೨೨: ಹುಬ್ಬಳ್ಳಿ ಹಿಂಸಾಚಾರ ಪ್ರಕರಣದ ಹಿಂದೆ ಕೆಲವು ಸಂಘಟನೆಗಳು ಸೇರಿದಂತೆ ಹಲವು ಕಾಣದ ಕೈಗಳಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದು ಅವರನ್ನು ಕಟಕಟೆಗೆ ತಂದು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಸಾಮಾಜಿಕ ಸೌಹಾರ್ದತೆ ಕದಡುವ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಹಾಗೂ ಅಂತಹ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವರು ಇದೇ ವೇಳೆ ತಿಳಿಸಿದ್ದಾರೆ. ಹುಬ್ಬಳ್ಳಿಯ ಘಟನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆಸುವ ಉದ್ದೇಶವಿತ್ತು. ಆದರೆ ನಮ್ಮ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದೆವು, ಪ್ರಚೋದನೆ ನೀಡಿದ್ದ ಮೌಲ್ವಿಯನ್ನು ಬಂಧಿಸಲಾಗಿದ್ದು, ಘಟನೆಯ ಹಿಂದೆ ಯಾರು, ಯಾವ ಸಂಘಟನೆಗಳಿವೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ. ಅಮಾಯಕರನ್ನು ಪ್ರಚೋದಿಸಲಾಗಿದ್ದು, ಅವರನ್ನು ಗಲಭೆಯಲ್ಲಿ ತೊಡಗಿಕೊಳ್ಳುವುದಕ್ಕೆ ಬೀದಿಗೆ ಕಳಿಸಲಾಗಿದೆ, ನಿರ್ದಿಷ್ಟ ಸಮುದಾಯದ ವಿರುದ್ಧ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬ ಬಗ್ಗೆ ಅರಿವಿದೆ, ಅಂತಹವರನ್ನು ನಿಯಂತ್ರಿಸುತ್ತೇವೆ, ಅಂತಹ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ. ಸಮಾಜದಲ್ಲಿ ಎಲ್ಲಾ ಸಮುದಾಯದವರು ಸೌಹಾರ್ದತೆಯಿಂದ ಬದುಕುವುದಕ್ಕೆ ಸಾಧ್ಯವಾಗುವಂತೆ ಶಾಂತಿ ಸ್ಥಾಪನೆಯಾಗಬೇಕಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳಿಗೆ ರಜೆಗಳ ಕಡಿತ
ಬೆಂಗಳೂರು, ಏ. ೨೨: ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳಿಗೆ ಕನಿಷ್ಟ ಶೇ. ೪೦ ರಷ್ಟು ಭೌತಿಕ ತರಗತಿಗಳು ನಷ್ಟವಾಗಿದ್ದು, ಶಿಕ್ಷಣ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಹೊಸ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಿದೆ. ಕಲಿಕೆಯ ನಷ್ಟವನ್ನು ಸರಿದೂಗಿಸಲು ೨೬ ಹೆಚ್ಚುವರಿ ದಿನಗಳೊಂದಿಗೆ ಶೈಕ್ಷಣಿಕ ತರಗತಿ ವರ್ಷವು ಬೇಗನೆ ಪ್ರಾರಂಭವಾಗಿ ತಡವಾಗಿ ಕೊನೆಗೊಳ್ಳುತ್ತದೆ. ಈ ವರ್ಷ ಶೈಕ್ಷಣಿಕ ವರ್ಷದ ಮೊದಲ ಅವಧಿಯು ಮೇ ೧೬ ರಿಂದ ಅಕ್ಟೋಬರ್ ೨ ರವರೆಗೆ ಇರುತ್ತದೆ; ಎರಡನೆಯದು ಅಕ್ಟೋಬರ್ ೧೭ ರಿಂದ ಏಪ್ರಿಲ್ ೧೦ ರವರೆಗೆ ಇರುತ್ತದೆ. ಬೇಸಿಗೆ ರಜೆಗಳನ್ನು ೪೮ ದಿನಗಳಿಗೆ ಮತ್ತು ದಸರಾವನ್ನು ೧೪ ದಿನಗಳವರೆಗೆ ಕಡಿತಗೊಳಿಸಲಾಗುತ್ತದೆ. ಎಲ್ಲೆಲ್ಲಿ ಕ್ರಿಸ್‌ಮಸ್ ರಜೆ ಘೋಷಣೆ ಮಾಡಬೇಕೋ ಅಲ್ಲೆಲ್ಲ ದಸರಾ ರಜೆ ಕಡಿತಗೊಳಿಸಲಾಗುತ್ತದೆ. ೩೩೦ ದಿನಗಳಲ್ಲಿ ದಸರಾ, ಬೇಸಿಗೆ ಮತ್ತು ಸರ್ಕಾರಿ ರಜೆಗಳು ಸೇರಿದಂತೆ ೬೦ ದಿನಗಳ ರಜೆ ಇರುತ್ತದೆ. ಸಹಪಠ್ಯ ಚಟುವಟಿಕೆಗಳು, ಪರೀಕ್ಷೆಗಳು, ಪೋಷಕ-ಶಿಕ್ಷಕರ ಸಭೆಗಳು, ವಿಹಾರಗಳು ಮತ್ತು ಕಾರ್ಯಗಳು ೨೮ ದಿನಗಳನ್ನು ತೆಗೆದುಕೊಳ್ಳುತ್ತದೆ, ತರಗತಿಗಳನ್ನು ೨೨೮ ದಿನಗಳಲ್ಲಿ ನಡೆಸಲಾಗುತ್ತದೆ. ತರಗತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಬೆಳಿಗ್ಗೆ ೧೦ ರಿಂದ ಸಂಜೆ ೪.೨೦ ರವರೆಗೆ ಇರುತ್ತದೆ.