ಸಾಧ್ಯತೆಗಳ ಬಗ್ಗೆ ಕಾರ್ಯಕರ್ತರ ಚರ್ಚೆ

ಸೋಮವಾರಪೇಟೆ, ಏ. ೨೧: ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಸಂಘರ್ಷಗಳ ಪ್ರಕರಣಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿರುವ ಕೊಡಗಿನ ಬಿಜೆಪಿ ಕಾರ್ಯಕರ್ತರು, ವೀರಾಜಪೇಟೆಯ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿಯ ಅಪ್ಪಚ್ಚು ರಂಜನ್ ಅವರುಗಳು ಈ ಬಾರಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಆಗಾಗ್ಗೆ ನಡೆಯುತ್ತಿರುವ ಕೋಮು ಸಂಘರ್ಷ, ಹಿಂದೂ ಕಾರ್ಯಕರ್ತರ ಹತ್ಯೆ, ಹಲ್ಲೆಯಂತಹ ಪ್ರಕರಣಗಳಿಗೆ ರಾಜ್ಯದ ಗೃಹ ಸಚಿವರು ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ವಿಧಾನಸಭಾ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ರಾಜ್ಯ ಗೃಹ ಸಚಿವ ಸ್ಥಾನ ಲಭಿಸುವುದು ಬಹುತೇಕ ಖಚಿತವಾಗಿದೆ ಎಂದು ಕೆ.ಜಿ. ಬೋಪಯ್ಯ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟಿದ್ದಾರೆ.

ಇದರೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖಾ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾಗಿರುವ ಸ್ಥಾನಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ನೇಮಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ರಂಜನ್ ಬೆಂಬಲಿಗರು ಸಂದೇಶ ಹಾಕುತ್ತಿದ್ದಾರೆ.

೫ ಬಾರಿ ಶಾಸಕರಾಗಿರುವ ಅಪ್ಪಚ್ಚು ರಂಜನ್ ಅವರಿಗೆ ಕಳೆದ ೨೦೧೨ರಲ್ಲಿ ಕೆಲ ತಿಂಗಳುಗಳು ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿದರೆ ಕೊಡಗು ಸೇರಿದಂತೆ ಕೊಡವ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರೊಂದಿಗೆ ಹಿರಿಯ ಶಾಸಕರಾಗಿದ್ದರೂ ಸೂಕ್ತ ಸ್ಥಾನಮಾನ ಸಿಗದಿರುವ, ಸಂಘ ಪರಿವಾರದ ಬೆಂಬಲದೊAದಿಗೆ ಪಕ್ಷ ನಿಷ್ಠೆ ಹೊಂದಿರುವ, ಯಾವುದೇ ಹಗರಣ, ವಿವಾದಗಳಿಂದ ಮುಕ್ತರಾಗಿರುವ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ಚಿಂತನೆ ಹರಿಸಿದ್ದಾರೆ ಎಂದು ಬೆಂಬಲಿಗರು ಖುಷಿಯಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ಮುಖಂಡರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಶಾಸಕರುಗಳೂ ಸಹ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ಈ ಮಧ್ಯೆ ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಮೇಲೆ ಸಚಿವಾಕಾಂಕ್ಷಿಗಳ ದೃಷ್ಟಿ ನೆಟ್ಟಿದ್ದು, ವರಿಷ್ಠರ ಭೇಟಿ ನಂತರ ಸಂಪುಟ ವಿಸ್ತರಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಉಳಿದ ಅವಧಿಯಲ್ಲಿ ಸಚಿವ ಸ್ಥಾನ ಪಡೆದೇ ತೀರಬೇಕೆಂಬ ಶಾಸಕರುಗಳ ಪಟ್ಟಿಯಲ್ಲಿ ಕೊಡಗಿನ ಈರ್ವರು ಶಾಸಕರುಗಳ ಹೆಸರಿದ್ದು, ಬಿಜೆಪಿ ಹೈಕಮಾಂಡ್ ಮಣೆಹಾಕುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.