ಸಿದ್ದಾಪುರ, ಏ. ೨೧: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡುವಿನ ಖಾಸಗಿ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಪಕ್ಷದ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಮಸೀದಿ ನಿರ್ಮಾಣದ ಕುರಿತಾದ ಪರ-ವಿರೋಧ ಚರ್ಚೆಗೆ ಗ್ರಾಸವಾಯಿತು.

ಬೆಟ್ಟದ ಕಾಡುವಿನಲ್ಲಿ ಮುಸ್ಲಿಂ ಸಂಘಟನೆ ವತಿಯಿಂದ ಕಳೆದ ಮಹಾ ಮಳೆಗೆ ಪ್ರವಾಹದಿಂದ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗಾಗಿ ೧೫ ಮನೆ ನಿರ್ಮಿಸಿ, ಅರ್ಹ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಲಾಗಿತ್ತು. ಉಳಿದ ಜಾಗದಲ್ಲಿ ಸಂಘಟನೆಯು ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದು, ಮಸೀದಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಗ್ರಾಮ ಪಂಚಾಯಿತಿಯಿAದ ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಸಿತ್ತು. ಸಂಘಟನೆ ನೀಡಿದ ಅರ್ಜಿಯನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಕೂಡಲೇ ಅಂಗೀಕರಿಸಬೇಕೆAದು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರುಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ವಿರೋಧಿಸಿದ್ದು ಪರಸ್ಪರ ವಾಗ್ವಾದ ನಡೆಯಿತು. ಮಸೀದಿ ನಿರ್ಮಿಸಲು ಜಿಲ್ಲಾದಿಕಾರಿಯವರ ಆದೇಶ ಬೇಕಿದೆ. ಆದರೆ ಏಕಾಏಕಿ ಇಲ್ಲಿ ಮಸೀದಿ ನಿರ್ಮಿಸಲು ನೀಡಿದ ಅರ್ಜಿಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಗ್ರಾ.ಪಂ. ಸದಸ್ಯ ಶಿವದಾಸ್ ಒತ್ತಾಯ ಮಾಡಿದರು.

ಗ್ರಾಮದ ಸಮಸ್ಯೆ, ಅಭಿವೃದ್ಧಿ ಕುರಿತು ಚರ್ಚಿಸಬೇಕಾದ ಸಾಮಾನ್ಯ ಸಭೆಯು ಕೇವಲ ಮಸೀದಿ ನಿರ್ಮಾಣದ ಕುರಿತಾದ ಚರ್ಚೆಗೆ ಆಹುತಿಯಾಯಿತು.

ಪರ-ವಿರೋಧ ಚರ್ಚೆಯ ನಂತರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್ ಮಾತನಾಡಿ, ಮಸೀದಿ ನಿರ್ಮಾಣಕ್ಕೆ ಸಿಇಒರಿಂದ ಅಧಿಕೃತವಾಗಿ ಪರವಾನಗಿ ಪಡೆದ ನಂತರ ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.