ಮುಳ್ಳೂರು, ಏ. ೨೦: ಪರಿಶಿಷ್ಟ ಪಂಗಡದ ಹಾಡಿ ಜನರಿಗೆ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯ ಒದಗಿಸಿಕೊಡುವ ಹಿನ್ನೆಲೆ ಸರಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಸಮೀಪದ ಕೊಡ್ಲಿಪೇಟೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಹಾಗೂ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ಅಧಿಕಾರಿಗಳ ತಂಡ ಜೊತೆಗೂಡಿ ಬೆಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕಟ್ಟೆಪುರ ಗ್ರಾಮದಲ್ಲಿರುವ ಪ್ರತಿ ಪರಿಶಿಷ್ಟ ಪಂಗಡ ಮತ್ತು ಹಾಡಿ ನಿವಾಸಿಗಳ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿದರು.
ವಿಶೇಷ ಆಂದೋಲನ ನಡೆಸಿದ ಅಧಿಕಾರಿಗಳ ತಂಡ ಸರಕಾರದಿಂದ ಪರಿಶಿಷ್ಟ ಮತ್ತು ಹಾಡಿ ನಿವಾಸಿಗಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತಾದ ದಾಖಲಾತಿಗಳನ್ನು ಒದಗಿಸಿಕೊಟ್ಟರು. ನಿವಾಸಿಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ, ಜಾಬ್ಕಾರ್ಡ್ ಇನ್ನಿತರ ದಾಖಲಾತಿ ಇದೆಯೋ ಇಲ್ಲವೋ ಎಂದು ಪರಿಶೀಲನೆ ನಡೆಸಿದ ಬಳಿಕ ಯಾವುದೇ ದಾಖಲಾತಿ ಇಲ್ಲದ ನಿವಾಸಿಗಳನ್ನು ಗುರುತಿಸಿ ಫಲಾನುಭವಿಗಳಿಗೆ ದಾಖಲಾತಿಗಳನ್ನು ಒದಗಿಸಿಕೊಡಲು ಸಮೀಕ್ಷೆ ನಡೆಸಿದರು.
ವಿಶೇಷ ಆಂದೋಲನ ತಂಡದಲ್ಲಿ ಕಂದಾಯ ಇಲಾಖೆ ಅಧಿಕಾರಿ ಚೈತ್ರಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಲ್ತಾಫ್, ಬೆಸೂರು ಗ್ರಾ.ಪಂ. ಪಿಡಿಓ ಸುರೇಶ್, ಗ್ರಾ.ಪಂ. ಸಿಬ್ಬಂದಿ ಪಾವನಾ, ನಿಜಗುಣ ಸ್ಥಳೀಯರಾದ ಕಮಲಮ್ಮ ಮುಂತಾದವರು ಹಾಜರಿದ್ದರು.