ನಾಪೋಕ್ಲು, ಏ. ೨೦: ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ೨೨ನೇ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ತರಬೇತಿಯ ಬೇಸಿಗೆ ಶಿಬಿರಕ್ಕೆ ಡಾ. ಕೋಟೇರ ಪಂಚಮ್ ತಿಮ್ಮಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿಯನ್ನು ಸ್ಥಾಪಿಸುವುದರ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಅಕಾಡೆಮಿ ಸ್ಥಾಪಕ ಕಲಿಯಂಡ ಅಯ್ಯಣ್ಣ ಅವರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಾ. ಅವನಿಜ ಸೋಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಇಂದು ಮೊಬೈಲ್, ಟಿವಿ ಹಿಂದೆ ಬಿದ್ದು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಮೊಬೈಲ್ ಗೀಳಿನಿಂದ ಮಕ್ಕಳ ಪ್ರತಿಭೆ ಮುದುಡುತ್ತಿದೆ. ಶಿಬಿರಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಕ್ರೀಡಾ ತರಬೇತಿ ನಡೆಯುತ್ತಿದೆ. ಇಲ್ಲಿನ ಶಿಬಿರದಲ್ಲಿ ಕ್ರೀಡಾ ತರಬೇತಿಯೊಂದಿಗೆ ಸಾಂಸ್ಕೃತಿಕ ತರಬೇತಿಯನ್ನೂ ಮಕ್ಕಳಿಗೆ ಹೇಳಿಕೊಡಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭ ಶಿಬಿರದ ಸಂಘಟನೆಗಾಗಿ ರೂ. ೫,೦೦೦ ಕೊಡುಗೆಯನ್ನು ನೀಡಿದರು.
ಅಕಾಡೆಮಿ ಅಧ್ಯಕ್ಷ ಕಲಿಯಂಡ ಅಯ್ಯಣ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳಲ್ಲಿ ಶಿಸ್ತಿನ ಕೊರತೆ ಕಾಡುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ತರಬೇತಿಯ ಜೊತೆಗೆ ಶಿಸ್ತು ಹಾಗೂ ಸಮಯ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಶಿಬಿರ ನಡೆಸಲು ದಾನಿಗಳು ನೆರವು ನೀಡುತ್ತಿದ್ದಾರೆ. ಶಿಬಿರವು ಒಂದು ತಿಂಗಳ ಕಾಲ ನಡೆಯಲಿದ್ದು, ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಹಾಲು ನೀಡಲಾಗುತ್ತಿದೆ ಎಂದರು.
ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಹ್ಯಾರಿಸ್ ಮತ್ತು ಮಾಜಿ ಪೋಷಕರ ಪರವಾಗಿ ಲಯನ್ಸ್ ಎಳ್ತಂಡ ಬೋಪಣ್ಣ ಮಾತನಾಡಿದರು.
ತರಬೇತುದಾರರಾಗಿ ಕೇಟೋಳಿರ ಡಾಲಿ ಅಚ್ಚಪ್ಪ ಮತ್ತು ಅರೆಯಡ ಗಣೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕೊಂಡೀರ ನಾಣಯ್ಯ, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಅಕಾಡೆಮಿ ನಿರ್ದೇಶಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಬಿದ್ದಾಟಂಡ ಮಮತ ಚಿಣ್ಣಪ್ಪ ಸ್ವಾಗತಿಸಿ, ನಿರೂಪಿಸಿದರು. ಅಕಾಡೆಮಿ ಉಪಾಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ವಂದಿಸಿದರು.