ಸುಂಟಿಕೊಪ್ಪ, ಏ. ೨೦: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶೃದ್ಧಾಭಕ್ತಿ ಯಿಂದ ನೆರವೇರಿತು.
ಸೋಮವಾರದಂದು ಶ್ರೀ ಗಣಹೋಮದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶ್ರೀ ಬೈತೂರಪ್ಪ ಪೊವ್ವದಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ರುದ್ರಾಭೀಷೇಕವನ್ನು ದೇವಾಲಯದ ಪ್ರಧಾನ ಅರ್ಚಕರಾದ ಭಾನು ಪ್ರಕಾಶ್ ಭಟ್, ರಘುಪತಿಭಟ್ ಹಾಗೂ ರಮೇಶ್ ವೈದ್ಯ ತಂಡ ನೆರವೇರಿಸಿತು. ದೇವತಕ್ಕರಾದ ಜಗ್ಗಾರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದುಡಿಕೊಟ್ ಪಾಟ್, ಸಾಂಪ್ರ್ರದಾಯಿಕ ಕೊಡವ ವಾಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಮಹಾಪೂಜೆಯ ಬಳಿಕ ತೀರ್ಥ ಪ್ರಸಾದದೊಂದಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬದವರು ಸಾಂಪ್ರದಾಯಿಕ ವೇಶ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ಹಬ್ಬದ ಕಟ್ಟಿನ ಮರು ದಿನದಿಂದ ೧೧ ದಿನಗಳ ಕಾಲ ಬೆಳಗಿನ ಜಾವ ದೀಪದ ಬೆಳಕಿನಲ್ಲಿ ದೇವರಿಗೆ ಬೊಳಕಾಟ್ ನೃತ್ಯ ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ.
ತಾ.೫ ರಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ತಾ.೭ ರಂದು ದೇವಾಲಯದ ಆವರಣದಲ್ಲಿ ಹಬ್ಬದ ಕಟ್ಟನ್ನು ಹಾಕಲಾಗಿತ್ತು. ತಾ.೧೫ ರಂದು ಶ್ರೀ ಬಸವೇಶ್ವರ ದೇವರ ಎತ್ತುಪೋರಾಟದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು.