ಗೋಣಿಕೊಪ್ಪಲು, ಏ. ೧೯ : ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ದಕ್ಷಿಣ ಕೊಡಗಿನ ಬಿಟ್ಟಂಗಾಲ, ರುದ್ರಗುಪ್ಪೆ, ಬಿ. ಶೆಟ್ಟಿಗೇರಿ, ಕೊಂಗಣ, ಕುಂದ, ಈಚೂರು, ಹಾತೂರು, ಬೈಗೋಡು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿನಿAದ ವಾಸವಾಗಿದ್ದುಕೊಂಡು ಗ್ರಾಮದ ಸುತ್ತಮುತ್ತಲಿನ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ನಂತರ ಮಾನವನ ಹತ್ಯೆಗೆ ಕಾರಣವಾಗಿದ್ದ ೫ಕ್ಕೂ ಹೆಚ್ಚು ಹುಲಿಗಳು ಇದೀಗ ಗ್ರಾಮಗಳನ್ನು ತೊರೆದು ಮತ್ತೆ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕಿರುವ ಲಕ್ಷಣಗಳು ಕಂಡು ಬಂದಿವೆ. ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ತಂಡವು ನಿರಂತರ ಕಾರ್ಯಾಚರಣೆ ನಡೆಸಿದ್ದು, ಅಲ್ಲದೆ ವಿಪರೀತ ಬಿಸಿಲಿನ ಝಳವನ್ನು ತಾಳಲಾರದೆ ಹುಲಿಗಳು ನಿಶ್ಯಬ್ದವಾದ ಪ್ರದೇಶದತ್ತ ಹೆಜ್ಜೆ ಹಾಕಿರಬಹುದೆಂದು ವನ್ಯಜೀವಿ ವಿಭಾಗದ ಅನುಭವಿ ವೈದ್ಯರುಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊAಡಿದ್ದಾರೆ.
ಹುಲಿಯ ಸಂಚಾರ ಇಲ್ಲದಿರುವುದರಿಂದ ಸಹಜವಾಗಿಯೇ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೊಂಚಮಟ್ಟಿಗೆ ನೆಮ್ಮದಿ ತಂದAತಾಗಿದೆ. ಕಳೆದ ಒಂದು ವಾರದಿಂದ ಸಂಜೆಯ ವೇಳೆಯಲ್ಲಿ ಈ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳುತ್ತಿದೆ. ಮುಂಜಾನೆಯಿAದ ಸಂಜೆಯವರೆಗೆ ವಿಪರೀತ ಬಿಸಿಲಿರು ವುದರಿಂದ ತಂಪಾದ ಪ್ರದೇಶವನ್ನು ಹುಡುಕುತ್ತಾ ಹುಲಿಗಳು ತಮ್ಮ ಸ್ಥಳವನ್ನು ಬದಲಾಯಿಸಿರಬಹುದು ಎನ್ನಲಾಗಿದೆ.
ಹಲವಾರು ಜಾನುವಾರುಗಳ ಮೇಲೆ ದಾಳಿ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿಗಳು ಮಾ. ೨೮ರ ಮಧ್ಯಾಹ್ನದ ವೇಳೆ ಬಿಟ್ಟಂಗಾಲದ ಸಮೀಪದ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಕಾರ್ಮಿಕ ಗಣೇಶ್ ಎಂಬಾತನನ್ನು ಬಲಿ ತೆಗೆದು ಕೊಂಡಿತ್ತು. ಈ ಘಟನೆಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಗಣೇಶನ ಮೃತದೇಹ ಇಟ್ಟುಕೊಂಡ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಚಳುವಳಿ ನÀಡೆಸಿದ್ದರು.
ನರಬಲಿಯನ್ನು ತೆಗೆದುಕೊಂಡ ಹುಲಿಯನ್ನು ಕೊಲ್ಲುವಂತೆ ಪ್ರತಿಭಟನಾಕಾರರು ಒತ್ತಡ ಹೇರಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹುಲಿಯ ಸೆರೆಗೆ ಕಾರ್ಯಪ್ರವೃತ್ತರಾಗಿದ್ದರು. ತಿತಿಮತಿ, ಪೊನ್ನಂಪೇಟೆ, ನಾಗರಹೊಳೆ, ವೀರಾಜಪೇಟೆ ಸೇರಿದಂತೆ ಇನ್ನಿತರ ವಿಭಾಗದಿಂದ ಅರಣ್ಯ ಸಿಬ್ಬಂದಿಗಳನ್ನು ಕರೆಸಿಕೊಂಡ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.
ಮತ್ತಿಗೋಡು ಸಾಕಾನೆ ಶಿಬಿರದಿಂದ ಸಾಕಾನೆಗಳಾದ ಶ್ರೀಕಂಠ, ಭೀಮಾ ಹಾಗೂ ಮಹೇಂದ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ನಾಗರಹೊಳೆ ವನ್ಯಜೀವಿ ವಿಭಾಗದ ಡಿಎಫ್ಓ, ಶಿವರಾಮ್ ಬಾಬು, ಮಡಿಕೇರಿ ಡಿಎಫ್ಓ ಎ.ಟಿ. ಪೂವಯ್ಯ ಹಾಗೂ ವೀರಾಜಪೇಟೆ ಡಿಎಫ್ಓ ಚಕ್ರಪಾಣಿ, ಕುಟ್ಟಂದಿ ಬಳಿ ಕ್ಯಾಂಪ್ ಆರಂಭಿಸಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಆರಂಭಿಸಿದ್ದರು.
ಹುಲಿ ಸಂಚಾರದ ಗ್ರಾಮಗಳಲ್ಲಿ ೮೦ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಿ ಹುಲಿಯ ಸಂಚಾರದ ಬಗ್ಗೆ ಪ್ರತಿನಿತ್ಯ ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಅಶೋಕ್ ಹುನಗುಂದ, ದಿವಾಕರ್ ಸೇರಿದಂತೆ ನುರಿತ ಸಿಬ್ಬಂದಿಗಳು ಮಾಹಿತಿಗಳನ್ನು ಪಡೆದು ಮುಂದಿನ ಕಾರ್ಯಾಚರಣೆಯ ರೂಪುರೇಷೆ ನಿರ್ವಹಿಸುತ್ತಿದ್ದರು. ಹುಲಿಗಳು ಪ್ರತಿದಿನ ತನ್ನ ಸ್ಥಳವನ್ನು ಬದಲಾಯಿಸುತ್ತ ಸುರಕ್ಷಿತ ಸ್ಥಳದಲ್ಲಿ ವಾಸವಾಗುತ್ತಿದ್ದವು. ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು ೫ಕ್ಕೂ ಅಧಿಕ ತಂಡಗಳಾಗಿ ಕಾಡುಮೇಡು ಲೆಕ್ಕಿಸದೆ ಹುಲಿಯನ್ನು ಸೆರೆ ಹಿಡಿಯಲು ಸರ್ವ ಪ್ರಯತ್ನ ನಡೆಸಿದ್ದರು. ಹಲವೆಡೆ ಗ್ರಾಮಸ್ಥರಿಗೆ ಹುಲಿಗಳ ದರ್ಶನವಾಗುತ್ತಿತ್ತು. ಆದರೆ ಹುಲಿಗಳನ್ನು ಸೆರೆ ಹಿಡಿಯಲು ಆಗಿರಲಿಲ್ಲ.
ಕಾರ್ಯಾಚರಣೆ ತಂಡವು ನಿರಂತರ ಹುಲಿಯ ಹೆಜ್ಜೆ ಗುರುತು ಅರಸಿ ಹುಲಿಯನ್ನು ಸೆರೆ ಹಿಡಿಯಲು ಸಾಕಾನೆಗಳ ಸಹಕಾರ ಪಡೆದು ಬಿಸಿಲ ಬೇಗೆಯನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸುತ್ತಿದಂತೆ ಹುಲಿಯ ಸಂಚಾರ ದಿನಕಳೆದಂತೆ ಕಡಿಮೆಯಾಯಿತು. ಅರಣ್ಯ ಇಲಾಖೆಯು ಸತತ ೨೨ ದಿನಗಳ ಕಾಲ ನಿರಂತರ ಹುಲಿ ಕಾರ್ಯಾಚರಣೆ ನಡೆಸಿತ್ತು. ಗ್ರಾಮೀಣ ಪ್ರದೇಶದ ವಿವಿಧ ಭಾಗದಲ್ಲಿ ೫ ಹುಲಿಗಳು ಸಂಚಾರ ಮಾಡುತ್ತಿರುವ ಬಗ್ಗೆ ಕಾರ್ಯಾಚರಣೆ ತಂಡ ಅಳವಡಿಸಿದ್ದ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಪ್ರತಿ ಹುಲಿಗಳು ದಷ್ಟಪುಷ್ಟವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದೀಗ ಈ ಭಾಗದಲ್ಲಿ ಕಾಣಿಸಿಕೊಂಡಿದ್ದ ಹುಲಿಗಳು ಸಮೀಪದ ಬ್ರಹ್ಮಗಿರಿ ಅರಣ್ಯ ಪ್ರದೇಶದತ್ತ ತೆರಳಿರ ಬಹುದೆಂದು ಊಹಿಸಲಾಗಿದೆ.
ಕಳೆದ ಒಂದು ವಾರದಿಂದ ಹುಲಿ ಸಂಚಾರದ ಸುಳಿವು ಸುತ್ತಮುತ್ತಲಿನ ಗ್ರಾಮದಲ್ಲಿ ಕಂಡುಬಾರದೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹುಲಿ ಕಾರ್ಯಾಚರಣೆ ತಂಡವು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕ್ಯಾಂಪ್ನಲ್ಲಿ ತಂಗಿದೆ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ನಾಲ್ಕು ತಂಡಗಳು ವಿವಿಧ ಪ್ರದೇಶದಲ್ಲಿ ಕೂಂಬಿAಗ್ ನಡೆಸಿ ಹುಲಿಯ ಸಂಚಾರದ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
- ಹೆಚ್.ಕೆ. ಜಗದೀಶ್