ಮಡಿಕೇರಿ,ಏ.೧೮; ಸುತ್ತಲೂ ಹಸಿರ ವನರಾಶಿ., ನಡುವೆ ಜುಳು ಜುಳು ನಾದದೊಂದಿಗೆ ಹರಿಯುವ ಕಾವೇರಿ., ಅಲ್ಲಲ್ಲಿ ಒಂದಷ್ಟು ಜನರ ಓಡಾಟ.., ಧೋ.. ಎಂದು ಸುರಿದು ನಿಂತ ಮಳೆ ಹನಿ ಮರದೆಲೆಗಳಿಂದ ತೊಟ್ಟಿಕ್ಕುವ ಟಪ್., ಟಪ್ ನಿನಾದದೊಂದಿಗೆ ಕವಿ ಕೊರಳಿನಿಂದುಸುರಿ ಹರಿದ ಮನದ ಭಾವನೆಗಳ ಭಾವ ಲಹರಿ ಸುತ್ತಲೂ ಮಾರ್ದನಿಸಿತು.., ಕವಿಗಳೊಂದಿಗೆ ಪುಟ್ಟ ಜೋಪಡಿಯಲ್ಲಿ ನೆರೆದಿದ್ದ ಕಿವಿಗಳಿಗೂ ಇಂಪು ನೀಡಿತು., ಲೋಕದ ಎಲ್ಲ ವಿಚಾರಗಳೂ ಅಲ್ಲಿ ಬೆಳಕಿಗೆ ಬಂದವು.., ಸಂಜೆ ವೇಳೆಗೆ ಒಂದು ಸಾರ್ಥಕ ಕಾರ್ಯಕ್ರಮ ಅಲ್ಲಿ ಸಂಪನ್ನಗೊAಡಿತು..!

ಈ ಒಂದು ಸಾಹಿತ್ಯಕ ಸಮ್ಮಿಲನ ಕಂಡುಬAದಿದ್ದು ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮದಲ್ಲಿ., ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಕೊಡಗು ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕಾವೇರಿ ನಿಸರ್ಗಧಾಮದ ಮಡಿಲಲ್ಲಿ ಏರ್ಪಡಿಸಲಾಗಿದ್ದ ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿ-ಕವಯತ್ರಿಯರು ತಮ್ಮ ಮನದೊಳಗಿನ ಭಾವನೆಗಳಿಗೆ ಅಕ್ಷರದ ರೂಪ ನೀಡಿ ನೆರೆದಿದ್ದ ಸಾಹಿತ್ಯಾಭಿಮಾನಿಗಳಿಗೆ ರಸದೌತಣ ಉಣಬಡಿಸಿದರು. ಸುಮಾರು ೩೦ ಮಂದಿ ಕವಿಗಳು ಭಾಗವಹಿಸಿ ತಮ್ಮದೇ ಆದ ಧಾಟಿಯಲ್ಲಿ ಕಾವ್ಯಧಾರೆಯನ್ನು ಹರಿಸಿದರು.

ಕವಯತ್ರಿ ಮಾಲಾದೇವಿ ಮೂರ್ತಿ ಅವರು ತಮ್ಮ ನಲಿವು ನಿಲ್ಲಿಸಿದಾಗ ಕವನದಲ್ಲಿ ನೋವು ನಲಿವುಗಳ ಬಗ್ಗೆ ಬೆಳಕು ಚೆಲ್ಲಿದರೆ, ದೀಪಿಕಾ ಸುದರ್ಶನ್ ನಿಸರ್ಗದ ರಮಣೀಯತೆಯಲ್ಲಿ ನಿಸರ್ಗ ಹಾಗೂ ಕಾವೇರಿಯನ್ನು ಬಣ್ಣಿಸಿದರು. ವಸಂತಿ ರವೀಂದ್ರ ಬಂದನೋ ವಸಂತ ಬಂದನೋ ಎನ್ನುತ್ತಾ ವಸಂತ ಋತುವಿನ ಆಗಮನದ ಬಗ್ಗೆ ಹೇಳಿದರೆ, ಪಿ.ಎಸ್.ವೈಲೇಶ್ ತ್ರಿಪದಿ ಮುಕ್ತಕದಲ್ಲಿ ನೊಂದವರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದರಲ್ಲದೆ, ಸ್ಥಳದಲ್ಲೇ ಕವಿಗೋಷ್ಠಿ ಬಗ್ಗೆ ಆಶು ಕವಿತೆ ರಚನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಹೇಮಲತಾ ಪೂರ್ಣಪ್ರಕಾಶ್ ಬೆಳದಿಂಗಳ ಬಾನಿನಲ್ಲಿ ಪೂರ್ಣಚಂದ್ರನ ಬಗ್ಗೆ ವರ್ಣಿಸಿದರೆ, ಪಿ.ಜಿ. ಕವಿತಾ ಹೊಸ ಚಿಗುರುವಿನಲ್ಲಿ ಹೊಸ ವರ್ಷದ ಬಗ್ಗೆ ಸೊಗಸಾಗಿ ಬಣ್ಣಿಸಿದರು. ವತ್ಸಲಾ ಶ್ರೀಶಾ ಬಿತ್ತಿಬಿಡು ಒಲವ ಧಾನ್ಯವನ್ನು ಎಂದು ಹೇಳುತ್ತಾ ಸಮಾಜದಲ್ಲಾಗಬೇಕಾದ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲಿದರು. ಯಾಲದಾಳು ಕುಮುದಾ ಜಯಪ್ರಶಾಂತ್ ಮುತ್ತು ಮಾಣಿಕ್ಯವನ್ನು ನೆನೆಯುತ್ತಾ ವಿಧವೆಯರು ಅನುಭವಿಸುವ ನೋವನ್ನು ತೋಡಿಕೊಂಡರು. ಎಸ್.ಕೆ. ಈಶ್ವರಿ ಕೊಡೆಯ ಮಹತ್ವವನ್ನು ಸಾರಿದರೆ, ಎಸ್. ಸೈಮನ್ ಕರುನಾಡಿನ ರಾಜರತ್ನ ಪುನೀತ್‌ರಾಜ್‌ಕುಮಾರನ ನೆನೆಸಿಕೊಂಡರು.

ಕಣಜಾಲು ಪೂವಯ್ಯ ಚೈತ್ರದ ಶುಭಾಶಯ ಹೇಳಿದರೆ, ಸುನಿತಾ ವಿಶ್ವನಾಥ್ ಅಪ್ಪ ಅಗಲಿಕೆಯ ನೋವನ್ನು ತೋಡಿಕೊಂಡರು. ಉಳುವಂಗಡ ಕಾವೇರಿ ಉದಯ ಹೊಸ ಬೆಳಕಿನ ಯುಗಾದಿಯಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಕೊಂಡಾಡಿದರು. ದೂರದ ಶಿವಮೊಗ್ಗದ ಭದ್ರಾವತಿಯಿಂದ ಬಂದಿದ್ದ ಜಿ.ಬಿ. ಮಾಲತೇಶ್ ಕೊಡಗು ಜಿಲ್ಲೆ, ಇಲ್ಲಿನ ಸಂಸ್ಕೃತಿಯನ್ನು ಬಣ್ಣಿಸಿದರೆ, ಮತ್ತೊಬ್ಬಾಕೆ ಪಿ.ಎಂ. ರಾಣಿ ಕೊಡಗನ್ನು ಮರಿಬೇಡ ಎಂದು ಕೊಡಗಿನ ಐತಿಹ್ಯವನ್ನು ಸಾರಿದರು. ಮೈಸೂರಿನ ಜಿ.ಎನ್.ಸಿಂಚನ, ಆತ್ಮಸ್ಥೆöÊರ್ಯ ಎಂಬ ಕವನದಲ್ಲಿ ತನ್ನತನವ ನಿರೂಪಿಸಲು ಆತ್ಮಸ್ಥೆöÊರ್ಯ ಬೇಕು ಎಂದು ಪ್ರತಿಪಾದಿಸಿದರು. ಕೆ.ಜಿ.ರಮ್ಯ ತಮ್ಮ ಗಝಲ್‌ನಲ್ಲಿ ನೊಂದವರ ಪರ ಮಾತನಾಡು ಎಂಬ ಸಂದೇಶ ನೀಡಿದರೆ, ರಾಜೇಶ್ ಯುಗಾದಿ ಕಳೆಯಲಿ ಎಂದು ಯುಗಾದಿಯನ್ನು ಸಂಭ್ರಮಿಸಿದರು. ಸೌಮ್ಯ ಶೆಟ್ಟಿ ತಾನು ನೆಟ್ಟು ಬೆಳೆಸಿದ ಕರಿಬೇವು ಸೊಪ್ಪು ಕುಯ್ಯಲು ದೊಣ್ಣೆನಾಯಕನ ಅವಶ್ಯಕತೆ ಬಗ್ಗೆ ಮಾರ್ಮಿಕವಾಗಿ ನುಡಿದರೆ, ನ.ಲ.ವಿಜಯ ನಿಸರ್ಗಧಾಮದಲ್ಲಿ ಕೂಡಿ ಹಾಕಿರುವ ಜಿಂಕೆಗಳನ್ನು ಸ್ವಚ್ಛಂದವಾಗಿ ಬಿಟ್ಟುಬಿಡುವ ಬಗ್ಗೆ ಅಂತಕರಣದ ನುಡಿಯಾಡಿದರು. ಕೆ.ಪಿ ಸುದರ್ಶನ್, ಶರ್ಮಿಳಾ ರಮೇಶ್, ಸುಶೀಲ ಹಾನಗಲ್ ಅವರುಗಳು ಯುಗಾದಿಯ ಸಂಭ್ರಮದ ರಸದೌತಣ ಬಡಿಸಿದರು. ದೀಪಿಕಾ ಸಂದೀಪ್ ವೈಧವ್ಯ ಶಾಪವೇ..? ಎಂಬ ಕವನದಲ್ಲಿ ಗಂಡಿಗಿಲ್ಲದ ಆಚರಣೆ ಹೆಣ್ಣಿಗೇಕೇ? ಎಂದು ವಿಧವೆಯರು ಅನುಭವಿಸುವ ನೋವುಗಳನ್ನು ತೆರೆದಿಟ್ಟರು. ಥೋಮಸ್ ಅವರು ಬರಲಿದೆ ನಾಳೆ ಎನ್ನುತ್ತಾ ಸಮಾಜದಲ್ಲಿನ ಅರಾಜಕತೆ, ದೌರ್ಜನ್ಯದ ಬಗ್ಗೆ ತಮ್ಮದೇ ಆದ ಧಾಟಿಯಲ್ಲಿ ರೋಷದಿಂದ ಹೇಳಿದರು. ಜಯಲಕ್ಷಿ ಚೈತ್ರ ಮಾಸದ ಬಗ್ಗೆ ವರ್ಣಿಸಿದರೆ, ರಾಣಿ ರವೀಂದ್ರ ಯುಗಾದಿಯನ್ನು ಕೊಂಡಾಡಿದರು. ಪೂಜಾರೀರ ಕೃಪಾ ದೇವರಾಜ್ ಮಳೆ ಸುರಿಯುತ್ತಿದೆ ಎಂದು ವರ್ಷಾಧಾರೆಯ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಕುಡೆಕಲ್ ಸಂತೋಷ್ ಕನಸಿನ ಹುಡುಗಿ ಎನ್ನುತ್ತಾ ಪ್ರೀತಿಯ ಕನವರಿಕೆಗಳನ್ನು ತೇಲಿಬಿಟ್ಟರು.

ಇದೇ ಸಂದರ್ಭ ಸುನಿತಾ ಲೋಕೇಶ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಸುಗಂಧ ಜಯಪ್ಪ ಅವರು ಭಾವಗೀತೆಯನ್ನು ಹಾಡಿದರು. ನೆರದಿದ್ದ ಎಲ್ಲ ಕವಿ ಮನಸುಗಳಿಗೆ ಯುಗಾದಿಯ ಒಬ್ಬಟ್ಟು, ವಡೆ ಉಣಬಡಿಸಲಾಯಿತು.

ಗೋಷ್ಠಿಯನ್ನು ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿ ಸಿ. ಶಿವಕುಮಾರ್ ಉದ್ಘಾಟಿಸಿದರು. ಮೈಸೂರಿನ ಕವಿ ಜಯಪ್ಪ ಹೊನ್ನಾಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ. ವೈ.ಡಿ ರಾಜಣ್ಣ ಭಾಗವಹಿಸಿದ್ದರು. ಕನ್ನಡ ಸಿರಿ ಸ್ನೇಹ ಬಳಗದ ಸಂಚಾಲಕ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ರಮೇಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಉಪಸ್ಥಿತರಿದ್ದರು.

?ಸಂತೋಷ್