ಸೋಮವಾರಪೇಟೆ, ಏ. ೧೮: ಪ್ರಕೃತ್ತಿಯಲ್ಲಿನ ಕೀಟಗಳ ನಿಯಂತ್ರಣ ದಲ್ಲಿ ಹಕ್ಕಿಗಳ ಪಾತ್ರ ಪ್ರಮುಖವಾಗಿದ್ದು, ಹಕ್ಕಿಗಳ ಸಂರಕ್ಷಣೆ ಮಾನವನ ಹೊಣೆಯಾಗಿದೆ. ಈಗಾಗಲೇ ಪರಿಸರದಲ್ಲಿ ಶೇ. ೯೯ ರಷ್ಟು ಜೀವಿಗಳು ವಿನಾಶ ಹೊಂದಿವೆ. ಮುಂದೆ ನಾವು ಉಳಿಯಬೇಕಾದಲ್ಲಿ ಪರಿಸರ ಉಳಿವಿಗಾಗಿ ಮುಂದಾಗಲೇ ಬೇಕಿದೆ ಎಂದು ಹಿರಿಯ ಪಕ್ಷಿ ತಜ್ಞ ಮತ್ತು ಲಿಮ್ಕಾ ಪ್ರಶಸ್ತಿ ಪುರಸ್ಕೃತ ಡಾ. ನರಸಿಂಹನ್ ಅಭಿಪ್ರಾಯಿಸಿದರು.

ನಾವು ಪ್ರತಿಷ್ಠಾನ, ಒಕ್ಕಲಿಗರ ಯುವ ವೇದಿಕೆ ಸಹಯೋಗದಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಹಕ್ಕಿಗೊಂದು ಗುಟುಕು ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯ ವೀಕ್ಷಣೆಯಲ್ಲಿ ನಮ್ಮ ಎಲ್ಲ ಇಂದ್ರಿಯಗಳನ್ನು ಚುರುಕಾಗಿ ಇಟ್ಟುಕೊಳ್ಳಬೇಕು. ನಾವು ಪರಿಸರಕ್ಕೆ ಅನಿವಾರ್ಯವಲ್ಲವಾದರೂ, ನಮಗೆ ಪ್ರಕೃತಿ ಅನಿವಾರ್ಯವಾಗಿದೆ. ಎಲ್ಲ ಆಗುಹೋಗುಗಳನ್ನು ಗಮನಿಸಬೇಕು. ವಿದ್ಯಾರ್ಥಿಗಳು ಮೆದುಳಿಗೆ ನಿರಂತರ ಕೆಲಸ ಕೊಟ್ಟಲ್ಲಿ ಜ್ಞಾನ ವೃದ್ಧಿಯೊಂದಿಗೆ, ದೀರ್ಘಾಯುಷಿಯಾಗಲು ಸಾಧ್ಯ ಎಂದರು.

ಚಿತ್ರ ಕಲಾವಿದರು ಮತ್ತು ಪಕ್ಷಿ ತಜ್ಞರಾದ ಹಾಸನದ ದೇಸಾಯಿ ಮಾತನಾಡಿ, ಹಕ್ಕಿಗಳಲ್ಲಿ ಗಂಡು ಹಕ್ಕಿಗಳು ಸುಂದರವಾಗಿವೆ. ಮನುಷ್ಯನ ದುರಾಸೆಯಿಂದಾಗಿ ಅರಣ್ಯ ನಾಶದೊಂದಿಗೆ ಹಲವು ಪಕ್ಷಿಗಳು ಅಳಿವಿನಂಚಿಗೆ ತಲುಪುತ್ತಿವೆ. ಪ್ರಕೃತಿಗೆ ಹಲವು ಜೀವಿಗಳು ತಮ್ಮದೇ ಕೊಡುಗೆ ನೀಡುತ್ತಿವೆ; ಅದನ್ನು ನಾವುಗಳೂ ಸಹ ಅಳವಡಿಸಿಕೊಳ್ಳಬೇಕು. ಪರಿಸರ ಸಮತೋಲನಕ್ಕಾಗಿ ಎಲ್ಲ ಜೀವಿಗಳು ಅವಶ್ಯಕವಾಗಿದ್ದು, ಯಾವುದೇ ಒಂದು ಜೀವಿಗೂ ತೊಂದರೆಯಾದರೂ, ಪರಿಸರದ ಅಸಮತೋಲನಕ್ಕೆ ಕಾರಣ ವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಹಾಸನದ ಪಕ್ಷಿ ತಜ್ಞರು ಹಾಗೂ ವಿಜ್ಞಾನ ಬರಹಗಾರರಾದ ಕೆ.ಎಸ್. ರವಿಕುಮಾರ್ ವಿದ್ಯಾರ್ಥಿಗಳಿಗೆ ಪರಿಸರ ಜಾಲ ಮತ್ತು ಸಸ್ಯ ಸಂಕುಲದ ಮಾಹಿತಿ ನೀಡಿದರು. ಹಾಸನ ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಅಹ್ಮದ್ ಹಗರೆ ಪಕ್ಷಿ ವೀಕ್ಷಣೆ ಸಂದರ್ಭ ಯಾವ ರೀತಿಯಲ್ಲಿ ನಮ್ಮ ಚಲನವಲನ ಇರಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾವು ಪ್ರತಿಷ್ಠಾನದ ಅಧ್ಯಕ್ಷ ಗೌತಮ್ ಕಿರಗಂದೂರು, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಶಶಿ ಇದ್ದರು. ಹಕ್ಕಿಗೊಂದು ಗುಟುಕು ಪ್ರಬಂಧ ಸ್ಪರ್ಧೆ ಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪುಷ್ಪಗಿರಿ ಅರಣ್ಯ ವಲಯದಲ್ಲಿ ಪರಿಸರ ವೀಕ್ಷಣೆ ಮತ್ತು ಮಾಹಿತಿ ಕಾರ್ಯಾಗಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.