ಮಡಿಕೇರಿ, ಏ. ೧೮: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಡಾ. ಸಿ ಅಶ್ವಥ್ ಕಲಾಮಂದಿರದಲ್ಲಿ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರು ಬರೆದ ಕಥಾಸಂಕಲನ ಕಾವೇರಿ ತೀರದ ಕಥೆಗಳು ಮತ್ತು ಹನಿಗವನಗಳ ಸಂಕಲನವಾದ ಮುತ್ತಿನಹಾರ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಖ್ಯಾತ ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ) ಮೇಜರ್ ಡಾ ಕುಶ್ವಂತ್ ಕೋಳಿಬೈಲು ಅವರ ಪುಸ್ತಕಗಳ ಬಗ್ಗೆ ಮಾತನಾಡಿದರು. ಕಥೆಗಾರ್ತಿ ರಂಜನಿ ರಾಘವನ್ ಮುತ್ತಿನಹಾರದ ಕೆಲವು ಹನಿಗಳನ್ನು ವಾಚನ ಮಾಡಿದರು. ವೇದಿಕೆಯಲ್ಲಿದ್ದ ನಿವೃತ್ತ ಎಸಿಪಿ ಟೈಗರ್ ಬಿ.ಬಿ. ಅಶೋಕ್ ಕುಮಾರ್, ವೀರಪ್ಪನ್ ಕಾರ್ಯಾಚರಣೆಯ ದಿನಗಳನ್ನು ನೆನಪಿಸಿಕೊಂಡರು. ಬೆಂಗಳೂರಿನ ಮೈತ್ರಿ ಪ್ರಕಾಶನ ಸಂಸ್ಥೆಯವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಚಾರುದತ್ ದೇಸಾಯಿಯವರು ನಿರೂಪಿಸಿದರು.

ಸಾಧಕನಿಗೆ ಸನ್ಮಾನ

ಇದೇ ಸಂದರ್ಭ ಕನ್ನಡ ಚಲನಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಚರಣ್‌ರಾಜ್ ಎಮ್ ಆರ್ ಅವರನ್ನು ಸನ್ಮಾನಿಸಲಾಯಿತು. ಕನ್ನಡದ ಜನಪ್ರಿಯ ಚಲನಚಿತ್ರಗಳಾದ ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಸಲಗ ಮತ್ತು ಟಗರು ಮತ್ತಿತರ ಚಲನಚಿತ್ರಗಳಿಗೆ ಇವರು ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ವೀರಾಜಪೇಟೆಯಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಅಧಿಕಾರಿ ರವಿ ಎಮ್ ಆರ್ ಮತ್ತು ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸೂದನ ಆರ್ ಉಷಾಲತಾ ಅವರ ಪುತ್ರರಾಗಿದ್ದಾರೆ.