ವೀರಾಜಪೇಟೆ, ಏ. ೧೭: ಮನುಷ್ಯನಿಗೆ ನೀರು ಮತ್ತು ಗಾಳಿ ಅತ್ಯಾವಶ್ಯಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೩೩೫ನೇ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಯಲ್ಲಿ ಕೆರೆಯನ್ನು ಹೂಳೆತ್ತಿ ಪುನಶ್ಚೇತನ ಗೊಳಿಸಲಾದ ಸುಂಕದಕಟ್ಟೆಯ ಪಂಪ್ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಧರ್ಮಸ್ಥಳ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರು ಕೆರೆ ಅಭಿವೃದ್ಧಿ ಕಾರ್ಯದೊಂದಿಗೆ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ಇಲ್ಲಿ ಅಭಿವೃದ್ಧಿಗೊಳಿಸಿರುವ ಕೆರೆಯ ಸುತ್ತು ಪಟ್ಟಣ ಪಂಚಾಯಿತಿ ತಂತಿ ಬೇಲಿ ನಿರ್ಮಣಗೊಳಿಸಬೇಕು. ಕೆರೆ ಒತ್ತಿನಲ್ಲಿರುವ ಜಾಗವನ್ನು ಯಾರು ಅತಿಕ್ರಮಣ ಮಾಡಬಾರದು. ಉಳಿದಿರುವ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡುವಂತೆ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಮಾತನಾಡಿ, ಕೆರೆ ಅಭಿವೃದ್ಧಿಗಾಗಿ ಕ್ಷೇತ್ರದಿಂದ ರೂ. ೩೦ ಕೋಟಿ ಯೋಜನೆ ರೂಪಿಸಲಾಗಿದ್ದು ಈ ವರ್ಷ ರಾಜ್ಯದಲ್ಲಿ ೧೧೦ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಕೆರೆ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು. ಯೋಜನೆಯ ಜಿಲ್ಲಾ ನಿದೇರ್ಶಕರಾದ ಡಾ, ಎ.ಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ನಮ್ಮಿಂದ ಕೆರೆ ಕಟ್ಟಲು ಸಾಧ್ಯವಾಗ ದಿದ್ದರು ಹಿರಿಯರು ಮಾಡಿರುವಂತ ಕೆರೆಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ಕೆರೆಗಳಿದ್ದು, ಎಲ್ಲಾ ಕೆರೆಗಳನ್ನು ಮುಂದಿನ ದಿನದಲ್ಲಿ ಅಭಿವೃದ್ಧಿ ಗೊಳಿಸುವುದಾಗಿ ತಿಳಿಸಿದರಲ್ಲದೆ. ಈಗ ಹೂಳೆತ್ತಿರುವ ಕೆರೆ ಬಳಿ ಯಾರು ಕಸಗಳನ್ನು ಹಾಕುವುದು ಕಂಡಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಜೂನಾ, ಸದಸ್ಯರಾದ ಮತೀನ್, ಮಹ್ಮದ್ ರಾಫಿ ಇತರರು ಉಪಸ್ಥಿತರಿದ್ದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಿ.ಹೆಚ್. ಪದ್ಮಯ್ಯ, ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.