ಸೋಮವಾರಪೇಟೆ, ಏ. ೧೭: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ತಾ. ೨೩ ರಂದು ಹೆಬ್ಬಾಲೆಯಲ್ಲಿ ವೀರಶೈವ ಸಮುದಾಯದವರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ಮೋಕ್ಷಿಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೆನ್ನಿಸ್‌ಬಾಲ್ ಕ್ರಿಕೆಟ್, ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಮಹಿಳೆಯರಿಗೆ ಥ್ರೋಬಾಲ್, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಪುರುಷರಿಗೆ ಹಗ್ಗ ಜಗ್ಗಾಟ ಸೇರಿದಂತೆ ಬಾಲಕ, ಬಾಲಕಿಯರಿಗೆ, ವಯಸ್ಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಅAದು ಬೆಳಿಗ್ಗೆ ೮.೩೦ ಗಂಟೆಗೆ ಬನಶಂಕರಿಯಮ್ಮ ದೇವಾಲಯದಿಂದ ಕ್ರೀಡಾಜ್ಯೋತಿಯೊಂದಿಗೆ ಬೈಕ್ ಜಾಥಾ ನಡೆಯಲಿದೆ. ಯುವಕ, ಯುವತಿಯರು ಬೈಕ್ ಸಹಿತ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾ. ೨೬ ರಂದು ಕುಶಾಲನಗರದ ರೈತಸಹಕಾರ ಭವನದಲ್ಲಿ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಜನಾಂಗದ ಸಾಧಕರನ್ನು ಗೌರವಿಸಲಾಗುವುದು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಘಟಕವನ್ನು ಗಣ್ಯರು ಉದ್ಘಾಟಿಸಲಿದ್ದಾರೆ.

ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ. ವಿವಿಧ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಮಹಾಸಭಾದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ಸಂಪನ್ಮೂಲ ವ್ಯಕ್ತಿ ಚಟ್ನಹಳ್ಳಿ ಮಹೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ನಿಕಟಪೂರ್ವ ಸರ್ಕಾರಿ ಅಭಿಯೋಜಕರಾದ ಎಚ್.ಎಸ್.ಚಂದ್ರಮೌಳಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ಆದರ್ಶ್ ಕೂಗೇಕೋಡಿ, ಕಾರ್ಯದರ್ಶಿ ಶಾಂಭಶಿವಪ್ಪ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ನಿತಿನ್ ಉಪಸ್ಥಿತರಿದ್ದರು.