ಗೋಣಿಕೊಪ್ಪಲು, ಏ. ೧೭: ಕಂದಾಯ ಇಲಾಖೆಯಲ್ಲಿ ಸುದೀರ್ಘ ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಾಲಿಬೆಟ್ಟ-ಮೇಕೂರು ನಿವಾಸಿ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿದ್ದ ಯು. ರಾಧಾಕೃಷ್ಣ ಅವರಿಗೆ ಇಲಾಖೆ ವತಿಯಿಂದ ಬೀಳ್ಕೊಡಲಾಯಿತು.

ಇಲಾಖೆಯಲ್ಲಿ ಅನುಭವಿ ಅಧಿಕಾರಿಗಳು ನಿವೃತ್ತಿ ಹೊಂದಿದ ನಂತರ ಇವರ ಸ್ಥಾನವನ್ನು ತುಂಬಲು ಮತ್ತೊಬ್ಬ ಅಧಿಕಾರಿ ಸಿಗುವುದು ಬಹಳ ಅಪರೂಪ. ಇಲಾಖೆಯಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲದಂತೆ ಕೆಲಸ ನಿರ್ವಹಿಸಿ ನಾಗರಿಕರ ಹಾಗೂ ಇಲಾಖಾ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಹಶೀಲ್ದಾರ್ ಪ್ರಶಾಂತ್ ಹೇಳಿದರು.

ಇಲಾಖೆ ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿರಸ್ತೇದಾರ್ ರಾಧಕೃಷ್ಣ, ಇಲಾಖೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದಾಗ ಅದನ್ನು ಧೈರ್ಯದಿಂದ ಎದುರಿಸಬೇಕು. ಇದರಿಂದ ಇಲಾಖೆಯ ಗೌರವ ಕಾಪಾಡಿದಂತಾಗುತ್ತದೆ. ಕಚೇರಿಗೆ ಬರುವವರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಸಹ ಸಿಬ್ಬಂದಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿಯ ರೆವಿನ್ಯೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಹಲವು ಸಿಬ್ಬಂದಿಗಳು ಮಾತನಾಡಿದರು. ಪೊನ್ನಂಪೇಟೆ ರೆವಿನ್ಯೂ ಅಧಿಕಾರಿ ಸುಧೀಂದ್ರ ಸ್ವಾಗತಿಸಿ, ವಂದಿಸಿದರು.