ಸಿದ್ದಾಪುರ, ಏ. ೧೭: ಪಾಲಿಬೆಟ್ಟ ಗ್ರಾ.ಪಂ ವ್ಯಾಪ್ತಿಯ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ೪೦ಕ್ಕೂ ಹೆಚ್ಚು ನಿರಾಶ್ರಿತ ವಸತಿ ರಹಿತ ಕುಟುಂಬಗಳಿAದ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಲು ಕೈಗೊಂಡಿರುವ ಹೋರಾಟ ಮುಂದುವರೆದಿದೆ.

ಪಾಲಿಬೆಟ್ಟ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು ೨೦೦ ಕ್ಕೂ ಅಧಿಕ ಮಂದಿ ವಸತಿರಹಿತರಿದ್ದು, ಎಲ್ಲರೂ ಬಾಡಿಗೆ ಮನೆ, ಲೈನ್ ಮನೆಗಳಲ್ಲಿ ವಾಸವಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಶಾಶ್ವತವಾಗಿ ಮನೆ ಕಟ್ಟಲು ಜಾಗ ಒದಗಿಸಿಕೊಂಡುವAತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸ.ನಂ ೧೬೦/೧೪ ರಲ್ಲಿ ಅನಧಿಕೃತವಾಗಿ ವ್ಯಕ್ತಿಯೋರ್ವರು ಮನೆ ನಿರ್ಮಿಸುತ್ತಿದ್ದು, ದಾಖಲೆಯಲ್ಲಿ ಆ ಜಾಗವು ಸರಕಾರದೆಂದಿದ್ದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿಯು ಜಾಗಕ್ಕೆ ಹಕ್ಕು ಪತ್ರವನ್ನು ನೀಡಿದ್ದಲ್ಲದೆ, ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ಹಣವನ್ನು ಬಿಡುಗಡೆ ಮಾಡಿದೆ. ಆದರೆ, ಇದೇ ಜಾಗದಲ್ಲಿ ನಾವು ಗುಡಿಸಲು ನಿರ್ಮಿಸಿದರೆ ನಮ್ಮ ವಿರುದ್ಧ ಕಾನೂನು ಕ್ರಮದ ಬೆದರಿಕೆಯೊಡ್ಡಿರುವುದು ಸರಿಯೇ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.

ವಸತಿ ರಹಿತರು ತಾತ್ಕಾಲಿಕ ಗುಡಿಸಲು ನಿರ್ಮಿಸಿ ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಬಂದ ಅಧಿಕಾರಿಗಳು ಮಹಿಳೆಯರ ವಿರುದ್ಧ ದರ್ಪ ತೋರಿ, ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವುದಾಗಿ ಬೆದರಿಸಿದ್ದಾರೆಂದು ಹೋರಾಟಗಾರ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋರಾಟ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಕೆ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು. ವಸತಿ ರಹಿತರ ಹೋರಾಟ ಹಾಗೂ ಅವರ ಸಮಸ್ಯೆಯ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.