ಮಡಿಕೇರಿ, ಏ. ೧೬: ೨೦೧೮ರಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೆರೆಸಂತ್ರಸ್ತರಿಗೆ ಸಮರ್ಪಕ ಹಾಗೂ ತ್ವರಿತವಾಗಿ ಪರಿಹಾರ ಕಲ್ಪಿಸಿದ್ದರೂ; ನಂತರದ ಬಿಜೆಪಿ ಸರಕಾರ ನೆರೆ ಸಂತ್ರಸ್ತರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಕೆ.ಆರ್. ನಗರದ ಶಾಸಕ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿ ಕೊಂಡಿರುವ

(ಮೊದಲ ಪುಟದಿಂದ) ಜನತಾ ಜಲಧಾರೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ೨೦೧೮ರಲ್ಲಿ ಕೊಡಗು ಜಿಲ್ಲೆ ಹಿಂದೆAದೂ ಕಾಣದ ಮಹಾಮಳೆಗೆ ತತ್ತರಿಸಿತ್ತು. ಭೂಕುಸಿತದಿಂದ ಆಸ್ತಿ-ಪಾಸ್ತಿ ನಷ್ಟವಾಗಿ ಸಾವಿರಾರೂ ಕುಟುಂಬಗಳು ಸಮಸ್ಯೆ ಅನುಭವಿಸಿದ್ದವು. ಅಂದಿನ ಸಮ್ಮಿಶ್ರ ಸರಕಾರ ಜನರ ಸಮಸ್ಯೆಯನ್ನು ಪರಿಹರಿಸುವಲ್ಲಿ ಶ್ರಮಿಸಿದೆ. ಸಕಾಲದಲ್ಲಿ ಪರಿಹಾರ ನೀಡುವ ಮೂಲಕ ಕಣ್ಣೀರೊರೆಸಿದೆ. ೮೪೦ ಕುಟುಂಬಗಳಿಗೆ ನಿವೇಶನ ಸಹಿತ ರೂ. ೯.೮೦ ಲಕ್ಷ ವೆಚ್ಚದ ಸುಸಜ್ಜಿತ ಮನೆ ನಿರ್ಮಿಸಿ ದೇಶಕ್ಕೆ ಮಾದರಿ ಯೋಜನೆ ರೂಪಿಸಿದ ಹೆಗ್ಗಳಿಕೆ ಅಂದಿನ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರಕ್ಕೆ ಸಲ್ಲುತ್ತದೆ ಎಂದರು.

೨೦೧೮ರಲ್ಲಿ ಸರಕಾರದ ಬೊಕ್ಕಸದಲ್ಲಿ ನೆರೆಸಂತ್ರಸ್ತರಿಗೆ ಮನೆ ನಿರ್ಮಿಸುವಷ್ಟು ಹಣವಿಲ್ಲದ ಸಂದರ್ಭ ಜನರಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ನಮ್ಮ ಸರಕಾರದ ಅವಧಿ ಕೊನೆಗೊಳ್ಳುವ ಸಮಯದಲ್ಲಿ ರೂ. ೯೦ ಕೋಟಿ ಹಣ ಇತ್ತು. ೨೦೧೯ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಸರಕಾರ ಯಾವುದೇ ರೀತಿಯಲ್ಲಿ ಪರಿಹಾರ ನೀಡಿಲ್ಲ. ನಮ್ಮ ಸರಕಾರ ಮನೆ ನಿರ್ಮಿಸಿದ ಬಳಿಕ ಒಂದೇ ಒಂದು ಮನೆಯನ್ನು ಬಿಜೆಪಿ ಸರಕಾರ ನಿರ್ಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿಗೆ ಬೇಡಿಕೆ ಇಟ್ಟ ಸಂದರ್ಭ ಇದಕ್ಕೆ ಅಂದಿನ ಸಮ್ಮಿಶ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆ ಈಡೇರಿಸಿದೆ. ಒಂದು ತಾಲೂಕು ಕೇಂದ್ರ ನಿರ್ವಹಣೆಗೆ ತಿಂಗಳಿಗೆ ೪೭ ಕೋಟಿ ಖರ್ಚಿದೆ. ೨೫ ವರ್ಷದ ಬೇಡಿಕೆಯನ್ನು ೪೦ ದಿನದಲ್ಲಿ ಪೂರೈಸಿದ ಹೆಗ್ಗಳಿಕೆ ಜೆಡಿಎಸ್‌ಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ದೇಶದಲ್ಲಿ ನೀರಾವರಿ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಜನತಾ ಜಲಧಾರೆ ಅಭಿಯಾನ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ೨೦೧೮ರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಬೆಟ್ಟದಷ್ಟಿದ್ದ ಸಮಸ್ಯೆಯನ್ನು ಪರಿಹರಿಸಿದ್ದಾರೆ. ೨ ತಾಲೂಕು ಬೇಡಿಕೆ ಈಡೇರಿಸಿದ್ದಾರೆ ಎಂದರು.

ಎಲ್ಲಾ ವಲಯಗಳಿಗೆ ಜೆಡಿಎಸ್ ಸರಕಾರ ಅನುದಾನ ನೀಡಿದೆ. ಜೆಡಿಎಸ್ ಅಧಿಕಾರ ಬಂದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ತಲೆಗೊಂದು ಸೂರು ಕೂಡ ದೊರೆಯುತ್ತದೆ ಎಂದರು.

ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದೆ. ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಕೆಲಸವಾಗಬೇಕು. ವ್ಯವಸಾಯಕ್ಕೆ ಹಾರಂಗಿ ಮೂಲಕ ನೀರು ಕಲ್ಪಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಯೋಜನೆ ಅನುಷ್ಠಾನಗೊಳ್ಳುತ್ತದೆ. ಇದರಿಂದ ೩೦ ಹಳ್ಳಿಗಳ ಬಹುದಿನಗಳ ಕನಸು ಈಡೇರುತ್ತದೆ. ಜನರು ಕೂಡ ಬದಲಾವಣೆ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯಿಂದ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಸೃಷ್ಟಿಸುವ ಕೆಲಸವಾಗುತ್ತಿದೆ. ಇದರ ವಿರುದ್ಧ ಜೆಡಿಎಸ್ ಗಟ್ಟಿಧ್ವನಿ ಮೊಳಗಿಸಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಷರೀಫ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುಬೀನಾ, ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ರಾಜ್ಯ ವಕ್ತಾರೆ ನಜ್ಮಾ ನಜೀರ್, ರಾಜ್ಯ ಮುಖಂಡ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.