ಸೋಮವಾರಪೇಟೆ, ಏ.೧೫: ಮಲೆಯಾಳಿ ಸಮುದಾಯದವರ ಹೊಸ ವರ್ಷವಾದ ವಿಶು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ನಿನ್ನೆ ರಾತ್ರಿಯೇ ಮನೆಯಲ್ಲಿ ವಿಶುಕಣಿಯನ್ನು ಪ್ರತಿಷ್ಠಾಪಿಸಿ, ಇಂದು ಬೆಳಿಗ್ಗೆ ಶುಭ್ರಗೊಂಡು ವಿಶುಕಣಿ ವೀಕ್ಷಿಸಿದ ನಂತರ ವಿಶೇಷ ಪೂಜೆ ನೆರವೇರಿಸಿದರು. ಮಲೆಯಾಳಿ ಸಮುದಾಯದವರ ಪ್ರತಿ ಮನೆಯಲ್ಲೂ ಸಡಗರ ಮನೆ ಮಾಡಿತ್ತು. ಹಣ್ಣು ಹಂಪಲು, ಚಿನ್ನ, ಹಣ, ಬಟ್ಟೆ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಟ್ಟು ಸೇರಿಸಿ(ವಿಶುಕಣಿ) ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಮನೆಮಂದಿ, ಇವೆಲ್ಲವೂ ಸಮೃದ್ಧಿಯಾಗಿ ಸಿಗುತ್ತಿರಲಿ ಎಂದು ಪ್ರಾರ್ಥಿಸಿದರು.
ನಂತರ ಹಿರಿಯರು ಕಿರಿಯರಿಗೆ ಕೈನೀಟಂ(ಹಣ ನೀಡುವುದು)ನೀಡಿ ಏಳಿಗೆಗಾಗಿ ಆಶೀರ್ವದಿಸಿದರು. ಮಧ್ಯಾಹ್ನ ಕುಟುಂಬಸ್ಥರು ಸಹಭೋಜನ ಸ್ವೀಕರಿಸಿ, ಅಕ್ಕಪಕ್ಕದವರು, ನೆಂಟರಿಷ್ಟರಿಗೆ ಹಬ್ಬದ ಶುಭಾಶಯ ಕೋರುವ ಮೂಲಕ ಸಂಪ್ರದಾಯಬದ್ದವಾಗಿ ಹೊಸವರ್ಷವನ್ನು ಆಚರಿಸಿದರು.