ಪೆರಾಜೆ, ಏ. ೧೫: ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ ಇಲ್ಲಿಯ ಜಾತ್ರೋತ್ಸವದ ಪ್ರಯುಕ್ತ ೩೦ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವು ಶ್ರೀ ಶಾಸ್ತಾವು ದೇವಸ್ಥಾನದ ಮುಂಭಾಗದ ಕಾವೇರಿ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಾಸ್ತಾವು ದೇವಸ್ಥಾನದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ನೆರವೇರಿಸಿದರು.

ಯುವಶಕ್ತಿ ಸಂಘದ ಅಧ್ಯಕ್ಷ ಪ್ರಸನ್ನ ನೆಕ್ಕಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಯುವಶಕ್ತಿ ಸಂಘದ ಸ್ಥಾಪಕಾಧ್ಯಕ್ಷ ದೊಡ್ಡಣ್ಣ ಬರಮೇಲು, ಪಂಚಾಯತ್ ಮಾಜಿ ಅಧ್ಯಕ್ಷ ಹೊನ್ನಪ್ಪ ಅಮಚೂರು, ಪಂಚಾಯತ್ ಸದಸ್ಯ ನಂಜಪ್ಪ ನಿಡ್ಯಮಲೆ, ಗೌತಮ್ ಮೂಲೆಮಜಲು, ನವೀನ ಕುಂದಲ್ಪಾಡಿ, ರೂಪಾಕ್ಷ ಬಂಗಾರಕೋಡಿ ಇದ್ದರು.

ಈ ಸಂದರ್ಭ ಮಂಗಳೂರಿನಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪೆರಾಜೆ ಮಜಿಕೋಡಿ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಂಚಾಲಕ ಸುಭಾಷ್ ಚಂದ್ರ ಬಂಗಾರಕೋಡಿ ಸ್ವಾಗತಿಸಿ, ಪ್ರಸನ್ನ ನೆಕ್ಕಿಲ ವಂದಿಸಿದರು, ಯೋಗಿತಾ ಬಂಗಾರಕೋಡಿ ನಿರೂಪಿಸಿದರು.

ನಂತರ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಶಿವಾಜಿ ವಾರಿಯರ್ಸ್ ಪೂಮಲೆ(ಪ್ರ) , ಎನ್.ಎಂ.ಸಿ ಸುಳ್ಯ (ದ್ವಿ), ಪಂಚಶ್ರೀ ಪಂಜ (ತೃ) ಮತ್ತು ಬಂಟೋಡಿ ತಂಡ (ಚ) ಸ್ಥಾನವನ್ನು ಪಡೆದುಕೊಂಡವು.