ವೀರಾಜಪೇಟೆ, ಏ. ೧೧: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳಲ್ಲಿನ ದೋಷಗಳನ್ನು ಸರಿಪಡಿಸಿ ನಿಖರವಾದ ಮತ್ತು ದೋಷಮುಕ್ತ ಮತದಾರರ ಪಟ್ಟಿಯನ್ನು ತಯಾರಿಸಲು ಪ್ರತಿ ಜಿಲ್ಲೆಗಳಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಪೈಲೇಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಗಿರುತ್ತದೆ. ಅದರಂತೆ ಕೊಡಗು ಜಿಲ್ಲೆಯ ೨೦೯ ವಿಧಾನ ಸಭಾ ಕ್ಷೇತ್ರವನ್ನು ಆಯ್ಕೆ ಮಾಡಲಾಗಿರುತ್ತದೆ. ೨೦೯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ಆರಂಭವಾಗಿದೆ. ಮನೆ ಮನೆ ಸಮೀಕ್ಷೆ ಕಾರ್ಯ ತಾ. ೧೬ರ ವರೆಗೆ ನಡೆಯಲಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಡಾ. ಆರ್. ಯೋಗಾನಂದ್ ತಿಳಿಸಿದ್ದಾರೆ.
ಮನೆ ಮನೆ ಸಮೀಕ್ಷೆ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಕುಟುಂಬವು ಬೇರೆ ಸ್ಥಳದಿಂದ ವಲಸೆ ಬಂದಿದ್ದರೆ ಹಿಂದಿನ ವಿಧಾನಸಭಾ ಕ್ಷೇತ್ರ, ಭಾಗದ ಸಂಖ್ಯೆ ಮತ್ತು ವಲಸೆ ವರ್ಷದ ವಿವರಗಳನ್ನು ಸಂಗ್ರಹಿಸುವುದು. ಮತದಾರರ ವಾಸ್ತವ್ಯ ಇರುವ ಸ್ಥಳದಲ್ಲಿ ಸಾಮಾನ್ಯ ನಿವಾಸಿ ಇಲ್ಲವಾದಲ್ಲಿ ನಿಜವಾದ ವಿಳಾಸದ ವಿವರವನ್ನು ಪಡೆದು ಅವರ ಹೆಸರು ಆ ಸ್ಥಳದಲ್ಲಿ ನೋಂದಾಯಿಸಲಾಗಿದೆಯೇ ಎಂದು ಪರಿಶೀಲಿಸುವುದು. ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಪ್ರತಿ ಮನೆಗೆ ತೆರಳುವಾಗ ಮತದಾರರ ಪಟ್ಟಿಯಲ್ಲಿ ಮತದಾರರ ಸೇರ್ಪಡೆಗೆ ನಮೂನೆ ೬, ಅನರ್ಹ ಮತದಾರರ ಹೆಸರು ಕೈಬಿಡುವ ಬಗ್ಗೆ ನಮೂನೆ ೭, ಮತದಾರರ ನಮೂದಿನಲ್ಲಿ ತಿದ್ದುಪಡಿ ಬಗ್ಗೆ ನಮೂನೆ ೮, ಮತ್ತು ವಿಧಾನಸಭಾ ಕ್ಷೇತ್ರದೊಳಗೆ ಮತದಾರರ ಹೆಸರು ವರ್ಗಾಹಿಸುವ ಬಗ್ಗೆ ನಮೂನೆ ೮ಎ ಯನ್ನು ಪಡೆದುಕೊಳ್ಳುವುದು.
ಅರ್ಹ ಹೆಸರನ್ನು ಸೇರಿಸಲು ಅನರ್ಹರಿರುವ ಹೆಸರನ್ನು ತೆಗೆಯಲು ಮತ್ತು ತಿದ್ದುಪಡಿಗಳಿದ್ದಲ್ಲಿ ಅಗತ್ಯ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿ ಸಹಕರಿಸಬೇಕೆಂದು ಹೇಳಿದರು.