ಗೋಣಿಕೊಪ್ಪಲು.ಏ.೧೧: ಕಳೆದ ೧೩ ದಿನಗಳಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಈಚೂರು ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿಯು ಇದೀಗ ಗೋಣಿಕೊಪ್ಪ ನಗರದ ಸಮೀಪವಿರುವ ಅತ್ತೂರು ಬಳಿಯ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದ ಕುಪ್ಪಂಡ ಮುತ್ತಪ್ಪ ಅವರ ಕಾಫಿ üತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ.
ಸುದ್ದಿ ತಿಳಿದ ಗ್ರಾಮಸ್ಥರು ಈ ಬಗ್ಗೆ ಕುಟ್ಟಂದಿ ಬಳಿ ಕ್ಯಾಂಪ್‌ನಲ್ಲಿರುವ ಹುಲಿ ಕಾರ್ಯಾಚರಣೆ ತಂಡಕ್ಕೆ ಮಾಹಿತಿ ಒದಗಿಸಿದರು. ಕೂಡಲೇ ಸ್ಥಳಕ್ಕೆ ತಿತಿಮತಿ ಅರಣ್ಯ ವಿಭಾಗದ ಎಸಿಎಫ್ ಉತ್ತಪ್ಪ, ಆರ್‌ಎಫ್‌ಒ ಅಶೋಕ್ ಹುನಗುಂದ, ಪೊನ್ನಂಪೇಟೆ ಅರಣ್ಯ ವಲಯದ ದಿವಾಕರ್ ಹಾಗೂ ಸಿಬ್ಬಂದಿಗಳು ತೆರಳಿ ಹುಲಿ ಹೆಜ್ಜೆ ಗುರುತನ್ನು ಪರಿಶೀಲಿಸಿದ್ದಾರೆ. ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ಕಾರ್ಯಾಚರಣೆಯ ಒಂದು ತಂಡವನ್ನು ಈ ಭಾಗದಲ್ಲಿ ನಿಯೋಜನೆಗೊಳಿಸಿದ್ದಾರೆ. ಕಳೆದ ೧೩ ದಿನಗಳಿಂದ ದ.ಕೊಡಗಿನ ವಿವಿಧ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಕಾರ್ಯಾಚರಣೆ ತಂಡ ವಿವಿಧ ತಂಡವಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಮಾ.೨೮ರಂದು ಕಾರ್ಮಿಕ ಗಣೇಶ್‌ನನ್ನು ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆಯಲ್ಲಿ ಹುಲಿದಾಳಿ ನಡೆಸಿ ಕೊಂದ ನಂತರ ನರಹಂತಕ ಹುಲಿಯ ಪತ್ತೆಗಾಗಿ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡವು ಹುಡುಕಾಟದಲ್ಲಿದೆ. ಆದರೆ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಈಚೂರು ಹಾಗೂ ಕೊಂಗಣ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಹುಲಿಗಳ ಸಂಚಾರ ಇರುವುದು ದೃಢಪಟ್ಟಿರುವುದರಿಂದ ಮಾನವನ ಮೇಲೆ ದಾಳಿ ಮಾಡಿದ ಹುಲಿಯನ್ನು ಪತ್ತೆಹಚ್ಚಲು ಅಧಿಕಾರಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ೧೦ ದಿನಗಳ ಬಿಡುವು ನೀಡಿದ್ದ ಹುಲಿಯು ಕುಂದ ಈಚೂರು ಭಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಸು ಹಾಗೂ ಕರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಸಹಜವಾಗಿಯೇ ಈ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹುಲಿಯ ಭಯ ಎದುರಾಗಿದೆ.
ಗೋಣಿಕೊಪ್ಪ ನಗರದ ಅನತಿದೂರದಲ್ಲಿ ಸೋಮವಾರ ಮಧ್ಯಾಹ್ನದ ವೇಳೆ ಅತ್ತೂರು ಬಳಿ ಹುಲಿ ಹೆಜ್ಜೆ ಕಾಣಿಸಿಕೊಂಡಿರುವುದರಿAದ ನಗರ ಪ್ರದೇಶಗಳಿಗೆ ಹೊಂದಿಕೊAಡಿರುವ ಕಾಫಿ ತೋಟದಲ್ಲಿ ಹುಲಿಯು ಅಡ್ಡಾಡುತ್ತಿರಬಹುದೇ.? ಎಂದು ಅಂದಾಜಿಸಲಾಗಿದೆ. ತೋಟಕ್ಕೆ ತೆರಳುವ ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಹಾಗೂ ಗುಂಪು ಗುಂಪಾಗಿ ತೆರಳುವಂತೆ ಅರಣ್ಯ ಅಧಿಕಾರಿಗಳು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ. -ಹೆಚ್.ಕೆ.ಜಗದೀಶ್