ಗೋಣಿಕೊಪ್ಪಲು, ಏ. ೧೩: ನರಭಕ್ಷಕ ಹುಲಿಯು ಕುಟ್ಟಂದಿ ಸಮೀಪದ ದಟ್ಟ ಅರಣ್ಯದ ಕಲ್ಲುಕೋರೆ ಬಳಿ ಚಿತ್ರ ಸೆರೆಯಾದ ನಂತರ ಈ ಭಾಗದ ಸುತ್ತಮುತ್ತಲಿನಲ್ಲಿ ನಾಲ್ಕು ಹುಲಿಗಳು ಇಲಾಖೆಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದರಿಂದ ಮನುಷ್ಯನ ಪ್ರಾಣ ತೆಗೆದ ಹುಲಿಯ ನಿಖರ ಮಾಹಿತಿ ಪಡೆಯಲು ಕಾರ್ಯಾಚರಣೆ ತಂಡ ಹರಸಾಹಸ ಪಡುತ್ತಿದೆ.

ವ್ಯಾಘ್ರನ ಸಂಚಾರವನ್ನು ಬೆನ್ನಟ್ಟಿರುವ ಹುಲಿ ಕಾರ್ಯಾಚರಣೆ ತಂಡ ಇತ್ತ ತನ್ನ ಕಾರ್ಯಾಚರಣೆ ಯನ್ನು ಪ್ರತಿನಿತ್ಯ ವಿವಿಧ ಪ್ರದೇಶದಲ್ಲಿ ನಡೆಸುತ್ತಿದೆ. ಸಿಬ್ಬಂದಿಗಳು ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ತಿಳಿಯಲು ವನ್ಯಜೀವಿ ವಿಭಾಗದ ಡಿಎಎಫ್‌ಒ ಶಿವರಾಮ್ ಬಾಬು ಖುದ್ದು ಕಾಡಿನೊಳಗೆ ತೆರಳಿದ್ದಾರೆ. ಸಿಬ್ಬಂದಿಗಳು ನಡೆಸುವ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಕಾರ್ಯಾಚರಣೆ ಯನ್ನು ಚುರುಕುಗೊಳಿಸಲು ನಿರ್ದೇಶನ ನೀಡಿದ್ದಾರೆ. ಕ್ಯಾಮೆರಾದಲ್ಲಿ ಸಿಕ್ಕಿರುವ ಹುಲಿಯ ಚಿತ್ರವನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರೂ ನರಹಂತಕ ಹುಲಿಯ ನಿಖರತೆಯನ್ನು ಕಂಡು ಹಿಡಿಯಲು ಪ್ರಯತ್ನಗಳು ಇನ್ನು ಮುಂದುವರೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಕುಂದ ಗ್ರಾಮದಲ್ಲಿ ಹಸು ಹಾಗೂ ಕರುವನ್ನು ಹುಲಿಯು ಕೊಂದು ಹಾಕಿತ್ತು. ನಂತರ ಯಾವುದೇ ಭಾಗದಲ್ಲಿ ಜಾನುವಾರುಗಳನ್ನು ಹುಲಿಯು ಕೊಂದ ಬಗ್ಗೆ ವರದಿ ಯಾಗಿಲ್ಲ. ಇಲಾಖೆಯ ಅನುಭವಿ ಅಧಿಕಾರಿಗಳು ಹಾಗೂ ವೈದ್ಯರ ತಂಡ ಸಾಕಾನೆಗಳ ಸಹಾಯ ಪಡೆದು ಪ್ರತಿನಿತ್ಯ ವಿವಿಧ ಗ್ರಾಮದಲ್ಲಿ ಕೂಬಿಂಗ್ ಕಾರ್ಯಾಚರಣೆ ಮುಂದುವರೆ ಸುತ್ತಿದ್ದಾರೆ.

ಹುಲಿಯ ಸಂಚಾರವಿರುವ ಸ್ಥಳಗಳಲ್ಲಿ ಹುಲಿಯ ಚಲನವಲನ ವೀಕ್ಷಿಸಲು ವಾಚ್‌ಟವರ್ ನಿರ್ಮಿಸಲಾಗಿದ್ದು ಅನುಭವಿ ಶಾರ್ಫ್ಶೂರ‍್ಸ್, ಅರವಳಿಕೆ ತಜ್ಞರು, ವೈದ್ಯರು, ವಾಚ್ ಟವರ್‌ನಲ್ಲಿ ಹುಲಿಯ ಓಡಾಟದ ಮಾಹಿತಿ ಸಂಗ್ರಹಿಸುತ್ತಿ ದ್ದಾರೆ. ಮಡಿಕೇರಿ ಡಿಎಫ್‌ಒ ಎ.ಟಿ.ಪೂವಯ್ಯ ಹಾಗೂ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ, ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಅಶೋಕ್ ಹುನಗುಂದ, ದಿವಾಕರ್ ಮತ್ತಿತರರು ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.