ಮಡಿಕೇರಿ, ಏ. ೧೨: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ತಾ. ೧೭ ರಂದು ಚುನಾವಣೆ ನಡೆಯಲಿದೆ. ಒಟ್ಟು ೧೭ ಸ್ಥಾನಗಳ ಪೈಕಿ ೭ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, ಇನ್ನುಳಿದ ೧೦ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ೧೮ ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಒಟ್ಟು ೧೭ ಸ್ಥಾನಗಳಿಗೆ ೨೬ ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ತಾ. ೧೧ ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದ್ದು, ಓರ್ವ ಅಭ್ಯರ್ಥಿ ವಾಪಸ್ ಪಡೆದುಕೊಂಡಿದ್ದಾರೆ. ೭ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂ ೧೮ ಮಂದಿ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ.

ಅವಿರೋಧ ಆಯ್ಕೆಯಾದವರು

ಕೊಡಗು ಜಿಲ್ಲಾ ಹಿಂದುಳಿದ ‘ಎ’ ಪ್ರವರ್ಗ ಕ್ಷೇತ್ರದಿಂದ ಕೆ.ಎಂ. ಗಣೇಶ್ (ಪ್ರಸಕ್ತ ಅಧ್ಯಕ್ಷರಾಗಿದ್ದವರು), ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ರಾಮಕೃಷ್ಣ (ಹಾಲಿ ನಿರ್ದೇಶಕರು), ಕೊಡಗು ಜಿಲ್ಲಾ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಪಿ. ಚಂದ್ರಶೇಖರ, ವೀರಾಜಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ಹಾಲಿ ನಿರ್ದೇಶಕರುಗಳಾದ ಕೆ.ಬಿ. ಗಿರೀಶ್ ಗಣಪತಿ, ಮಾದಪಂಡ ಪಿ. ಕಾವೇರಪ್ಪ, ಎಂ. ಬಿಜೋಯ್ ಹಾಗೂ ನೂತನವಾಗಿ ಕೆ.ಕೆ. ಶ್ರೀನಿವಾಸ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹತ್ತು ಸ್ಥಾನಕ್ಕೆ ಚುನಾವಣೆ

ಇನ್ನುಳಿದ ಹತ್ತು ಸ್ಥಾನಗಳಿಗೆ ನಡೆಯಲಿರುವ ಚುನಾವಣಾ ಸ್ಪರ್ಧಾ ಕಣದಲ್ಲಿ ಮಡಿಕೇರಿ ತಾಲೂಕು ಸಾಮಾನ್ಯ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ೮ ಮಂದಿ ಇದ್ದಾರೆ. ಹಾಲಿ ನಿರ್ದೇಶಕರಾಗಿರುವ ಅನಿಲ್ ಹೆಚ್.ಕೆ., ಬಾಬುಚಂದ್ರ ಉಳ್ಳಾಗಡ್ಡಿ, ಎಸ್.ಐ. ಮುನೀರ್ ಅಹ್ಮದ್, ಕೆ.ಇ. ಮ್ಯಾಥ್ಯೂ ಸೇರಿದಂತೆ ಸಿ.ಕೆ. ಬಾಲಕೃಷ್ಣ, ವಿ.ಬಿ. ಬ್ರಿಜೇಶ್, ಎಂ.ಕೆ. ಜಯಕುಮಾರ್, ಎ.ಕೆ. ಪಾಲಾಕ್ಷ ಅವರುಗಳಿದ್ದಾರೆ.

ಸೋಮವಾರಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದ ಮೂರು ಸ್ಥಾನಗಳಿಗೆ ಐವರು ಸ್ಪರ್ಧೆಯಲ್ಲಿದ್ದಾರೆ. ಹಾಲಿ ನಿರ್ದೇಶಕರಾಗಿರುವ ಎ.ಪಿ. ವೀರರಾಜು (ರಾಜಣ್ಣ), ಬಿ. ಜನಾರ್ಧನ ಪ್ರಭು ಸೇರಿದಂತೆ ಕೆ.ಎಸ್. ನಾಗೇಶ್, ಡಿ. ನರಸಿಂಹ, ಹೆಚ್.ಸಿ. ಯತೀಶ್ ಕುಮಾರ್ ಸ್ಪರ್ಧಿಸಿದ್ದಾರೆ. ಇನ್ನುಳಿದಂತೆ ಕೊಡಗು ಜಿಲ್ಲಾ ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಕ್ಕೆ ಮೂವರು ಸ್ಪರ್ಧೆಯಲ್ಲಿದ್ದಾರೆ. ಹಾಲಿ ನಿರ್ದೇಶಕರುಗಳಾಗಿರುವ ಬಿ.ಆರ್. ಸವಿತಾ ರೈ, ಎಸ್.ಎಂ. ಜಯಂತಿ ಹಾಗೂ ನೂತನವಾಗಿ ಬಿ.ಎ. ಸವಿತಾ ಕಣದಲ್ಲಿದ್ದಾರೆ. ಕೊಡಗು ಜಿಲ್ಲಾ ಹಿಂದುಳಿದ ‘ಬಿ’ ಪ್ರವರ್ಗ ಕ್ಷೇತ್ರದ ಒಂದು ಸ್ಥಾನಕ್ಕೆ ಈರ್ವರು ಪೈಪೋಟಿಯಲ್ಲಿದ್ದಾರೆ. ಡೆನ್ನಿಬರೋಸ್ ಹಾಗೂ ಸಿ.ಬಿ. ಪೂವಪ್ಪ ಸ್ಪರ್ಧಿಸಿದ್ದಾರೆ.

೧೭ ರಂದು ಚುನಾವಣೆ

ಹತ್ತು ಮಂದಿ ನಿರ್ದೇಶಕ ಸ್ಥಾನಕ್ಕೆ ತಾ. ೧೭ ರಂದು ಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆವರೆಗೆ ಕೊಹಿನೂರು ರಸ್ತೆಯಲ್ಲಿರುವ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಕಟ್ಟಡದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ಎಂ. ರಘು ತಿಳಿಸಿದ್ದಾರೆ.