ಮಡಿಕೇರಿ, ಏ. ೧೨: ಮಡಿಕೇರಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೧೮ನೇ ವಾರ್ಡ್ನ ಸದಸ್ಯ ಉಮೇಶ್ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

೧೧ ಬಿಜೆಪಿ ಸದಸ್ಯರುಗಳನ್ನು ಒಳಗೊಂಡಿದ್ದ ಸ್ಥಾಯಿ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ರಮೇಶ್, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ, ಎಸ್.ಸಿ. ಸತೀಶ್ ಆಕಾಂಕ್ಷಿ ಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ಅರುಣ್ ಶೆಟ್ಟಿ ಹಾಗೂ ಎಸ್.ಸಿ. ಸತೀಶ್ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಬಳಿಕ ಕೆ.ಎಸ್. ರಮೇಶ್ ಹಾಗೂ ಉಮೇಶ್ ಸುಬ್ರಮಣಿ ನಡುವೆ ಮಾತುಕತೆ ನಡೆದು ಅಂತಿಮವಾಗಿ ಉಮೇಶ್ ಸುಬ್ರಮಣಿ ಅವರನ್ನು ಬೆಂಬಲಿಸಲು ರಮೇಶ್ ಸಹಮತ ವ್ಯಕ್ತಪಡಿಸಿದರು. ನಂತರ ನಗರಸಭಾ ಸಭಾಂಗಣದಲ್ಲಿ ಸ್ಥಾಯಿ ಸಮಿತಿಯ ಎಲ್ಲ ಸದಸ್ಯರುಗಳು ಕೈ ಎತ್ತುವ ಮೂಲಕ ಉಮೇಶ್ ಸುಬ್ರಮಣಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಸಂದರ್ಭ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಆಯುಕ್ತ ರಾಮದಾಸ್ ಮತ್ತಿತರರಿದ್ದರು.