ಶನಿವಾರಸಂತೆ, ಏ. ೧೧: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶೋಭಿತ್ ಗೌಡ ಚುನಾಯಿತರಾದರು. ಉಪಾಧ್ಯಕ್ಷೆಯಾಗಿ ಅಪ್ಸರಿ ಬೇಗಂ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಹಾಗೂ ಉಪಾಧ್ಯಕ್ಷೆ ಗೀತಾತ್ಯಾಗರಾಜ್ ಕಳೆದ ತಿಂಗಳು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಈ ಚುನಾವಣೆ ನಡೆಯಿತು.

ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶೋಭಿತ್ ಗೌಡ, ಲಾವಣ್ಯ ಮತ್ತು ಯಶೋದಾ ನಾಮಪತ್ರ ಸಲ್ಲಿಸಿದ್ದು, ಕೊನೆಯ ಕ್ಷಣದಲ್ಲಿ ಯಶೋದಾ ಕಣದಿಂದ ಹಿಂದೆ ಸರಿದರು. ಶೋಭಿತ್ ಗೌಡ ಹಾಗೂ ಲಾವಣ್ಯ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು.

ಹದಿನೈದು ಸದಸ್ಯರಲ್ಲಿ ಶೋಭಿತ್ ಗೌಡ ೯ ಹಾಗೂ ಲಾವಣ್ಯ ೬ ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದು, ಯಾರೂ ನಾಮಪತ್ರ ಸಲ್ಲಿಸದ ಕಾರಣ ಹಿರಿಯ ಸದಸ್ಯೆ ಅಪ್ಸರಿ ಬೇಗಂ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿ ಕಾರಿಯಾಗಿ ತಾಲೂಕು ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಣ್ಣಯ್ಯ ಕಾರ್ಯನಿರ್ವಹಿಸಿದರು.

ಚುನಾವಣೆ ಮುಗಿದ ಬಳಿಕ ವಿಜೇತರು ಬೆಂಬಲಿಗರೊAದಿಗೆ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಮಾಡಿದರು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾಕೇರಿ ಸತೀಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಮುಖಂಡರಾದ ಕೆ.ಕೆ. ರೇಣುಕ, ಔರಂಗಜೇಬ್, ನಿರ್ಗಮಿತ ಅಧ್ಯಕ್ಷ ಶೋಭಿತ್ ಗೌಡ, ಉಪಾಧ್ಯಕ್ಷೆ ಗೀತಾತ್ಯಾಗರಾಜ್, ಸದಸ್ಯರಾದ ವಹಾಬ್, ಪ್ರಸನ್ನ ಇತರರು ಇದ್ದರು.