ಸೋಮವಾರಪೇಟೆ, ಏ. ೧೧: ಕೇಂದ್ರ ಸರ್ಕಾರದ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಗಗನಕ್ಕೇರುತ್ತಿದೆ. ಅವೈಜ್ಞಾನಿಕ ತೆರಿಗೆ ನೀತಿಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನದ ಮೇಲಿನ ತೆರಿಗೆಯನ್ನು ಅರ್ಧದಷ್ಟು ಕಡಿಮೆ ಮಾಡಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ನಾಗರಾಜ್ ಒತ್ತಾಯಿಸಿದರು. ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಸೇವಾದಳದ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಮಂಜುನಾಥ್, ಎಸ್.ಸಿ.ಘಟಕದ ತಾಲೂಕು ಕಾರ್ಯದರ್ಶಿ ಎಚ್.ಬಿ. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಎಚ್.ಬಿ.ರಾಜಪ್ಪ, ಪ್ರಮುಖರಾದ ಧರ್ಮಪ್ಪ, ಎಸ್.ಅಜಯ್, ಸಂಧ್ಯಾ, ಪುನಿತ್ ಇದ್ದರು.