ಮಡಿಕೇರಿ, ಏ.೧೧ : ಮಡಿಕೇರಿ ತಾಲೂಕಿನ ಆವಂಡಿ- ಮುಕ್ಕೋಡ್ಲು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ರೂ.೧.೫೦ ಕೋಟಿ ಬಿಡುಗಡೆಯಾಗಿದ್ದು, ಇಂದು ಕಾಮಗಾರಿಗೆ ಚಾಲನೆ ನೀಡಲಾಯಿತು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಗ್ರಾಮಗಳ ಅಭಿವೃದ್ಧಿ ಮತ್ತು ಜನಪರ ಕಾರ್ಯದಲ್ಲಿ ರಾಜಕೀಯ ಮಾಡುವುದಿಲ್ಲ. ಹೆಚ್ಚಿನ ಅನುದಾನಕ್ಕಾಗಿ ಕೋರಿಕೊಂಡ ಹಿನ್ನೆಲೆ ಸರ್ಕಾರ ಸ್ಪಂದಿಸಿ ಹಣ ನೀಡಿದೆ ಎಂದರು.

ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ದುರುಪಯೋಗ ಕಡಿಮೆ, ಇದೇ ಕಾರಣದಿಂದ ಇಲ್ಲಿನ ರಸ್ತೆಗಳು ಉತ್ತಮವಾಗಿವೆ. ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಗ್ರಾಮಸ್ಥರು ಸೇತುವೆಯ ಕಾಮಗಾರಿಯನ್ನು ಪರಿಶೀಲಿಸುತ್ತಿರಬೇಕು, ಕಳಪೆ ಗುಣಮಟ್ಟ ಕಂಡು ಬಂದರೆ ನಮಗೆ ದೂರು ನೀಡಬೇಕೆ ಹೊರತು ಅಧಿಕಾರಿಗಳು ಹಾಗೂ ಕೆಲಸಗಾರರ ಮೇಲೆ ಹಲ್ಲೆಗೆ ಮುಂದಾಗಬೇಡಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ ಈ ಭಾಗದ ಗ್ರಾಮಸ್ಥರ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಸೇತುವೆ ನಿರ್ಮಿಸಲು ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಸಚಿವರುಗಳಾದ ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರುಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸಹಕಾರ ನೀಡಿದ ಕಾರಣ ೧.೫ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಇರಬೇಕು, ಮೊದಲು ಅಭಿವೃದ್ಧಿ, ನಂತರ ರಾಜಕಾರಣ ಎಂದರು. ಊರವರ ಕನಸು ಇಂದು ನನಸಾಗಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಸೇತುವೆ ಶೀಘ್ರ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು. ಗ್ರಾಮದ ಪ್ರಮುಖರು ಸೇತುವೆ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಯಶಸ್ವಿಯಾದವರಿಗೆ ಧನ್ಯವಾದ ಅರ್ಪಿಸಿದರು.

ಮಕ್ಕಂದೂರು ಗ್ರಾ.ಪಂ ಅಧ್ಯಕ್ಷ ಶ್ಯಾಂ ಸುಬ್ಬಯ್ಯ, ಉಪಾಧ್ಯಕ್ಷರು ಹಾಗೂ ಸದಸ್ಯರು, ಪ್ರಮುಖರಾದ ಶಾಂತೆಯAಡ ಅಚ್ಚಯ್ಯ, ಹಂಚೆಟ್ಟಿರ ಮನುಮುದ್ದಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.