ವೀರಾಜಪೇಟೆ, ಏ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಜಿ ಸುರೇಶ್ ಅವರ ಕಾರ್ಯ ವೈಖರಿಯ ಬಗ್ಗೆ ಬೇಸತ್ತು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇವೆ. ಅವರೇ ಮುಂದುವರೆದರೆ ಇನ್ನು ಮುಂದೆ ಪಂಚಾಯಿತಿಯ ಯಾವುದೇ ಕಾರ್ಯಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಆರ್ ಸುನೀತಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾ ೧೨ ಪಂಚಾಯಿತಿಯ ಸಾಮಾನ್ಯ ಸಭೆಗೆ ಆಹ್ವಾನ ನೀಡಲಾಗಿತ್ತು. ಸಭೆ ಆರಂಭವಾಗುತ್ತಿದ್ದAತೆ ಸದಸ್ಯರು ಹಿಂದಿನ ಮಾಸಿಕ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈವರೆಗೆ ಯಾವುದು ಕಾರ್ಯಗತವಾಗಿಲ್ಲ. ಇನ್ನು ಮಾಸಿಕ ಸಭೆ ನಡೆಸುವ ಔಚಿತ್ಯ ಆದರು ಏನು.? ಪಂಚಾಯಿತಿ ವ್ಯಾಪ್ತಿಯ ಖಾಸಗಿ ವಾಣಿಜ್ಯ ಕಟ್ಟಡದಲ್ಲಿ ಹೊಟೇಲ್ ನಡೆಸುವ ವಿಚಾರ ನ್ಯಾಯಾಲಯದಲ್ಲಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪರವಾನಿಗೆ ನೀಡುವುದು ಸೂಕ್ತವಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಹೊಟೇಲ್ ನಡೆಸಲು ೯ ಮತ್ತು ೧೧ ಅಡಿಯಲ್ಲಿ ಕಂದಾಯ ನಿಗದಿ ಮಾಡಿ ಪರವಾನಗಿ ನೀಡಲಾಗಿದೆ.

ಇದನ್ನು ಪ್ರಶ್ನಿಸಿದರೆ ತಾಲೂಕು ಕಾರ್ಯ ನಿರ್ವಣಾಧಿಕಾರಿಗಳ ಆದೇಶದ ಮೇಲೆ ನೀಡಲಾಗಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಅಧ್ಯಕ್ಷರು ಹಾಗೂ ಸದಸ್ಯರುಗಳು ತೆಗೆದುಕೊಂಡಿರುವ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲದ ಮೇಲೆ ಎಲ್ಲಾ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದಾರೆ. ಯಾವುದೇ ಸಭೆ ಸಮಾರಂಭಗಳು ನಡೆಸುವಾಗ ಅಧ್ಯಕ್ಷರ ಗಮನಕ್ಕೆ ಬಾರದೆ ಎಲ್ಲವನ್ನು ಅವರೆ ನಡೆಸುತ್ತಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು, ನಿರ್ದೇಶಕರು ಪಂಚಾಯತ್ ರಾಜ್ ಇಲಾಖೆ, ಶಾಸಕರು, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಎಲ್ಲವೂ ಪಿಡಿಓ ಅವರ ಅಣತಿಯಂತೆ ನಡೆಯುವಾಗ ಚುನಾಯಿತ ಜನಪ್ರತಿನಿಧಿಗಳ ಅವಶ್ಯಕತೆ ಆದರು ಏನು ಎಂದು ಹೇಳಿದ ಅವರು ಪಿಡಿಓ ಅವರು ವರ್ಗ ಆಗುವವರೆಗೆ ಪಂಚಾಯಿತಿಯ ಯಾವುದೇ ಸಭೆ ಸಮಾರಂಭಗಳಿಗೆ ಹಾಜರಾಗುವುದಿಲ್ಲ ಎಂದು ಹೇಳಿದರು.

ಈ ವಿಚಾರದಲ್ಲಿ ಪಿಡಿಓ ಸುರೇಶ್ ಅವರಿಂದ ಮಾಹಿತಿ ಬಯಸಿದಾಗ ಕಟ್ಟಡ ಎ.ಕೆ ಜೋಯಪ್ಪ ಅವರ ಹೆಸರಿನಲ್ಲಿದೆ. ಕಟ್ಟಡ ವಿಚಾರದಲ್ಲಿ ಯಾವುದೇ ವ್ಯಾಜ್ಯಗಳಿಲ್ಲ. ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಪತ್ರದ ಮೂಲಕ ಕಂದಾಯ ನಿಗದಿ ಮಾಡಿಕೊಡಲಾಗಿದೆ. ಇದನ್ನು ಸಭೆಯಲ್ಲಿ ತಿಳಿಸಿದಾಗ ಅಧ್ಯಕ್ಷರು ಸೇರಿದಂತೆ ಕೆಲವು ಸದಸ್ಯರು ಸಭೆಯನ್ನು ಬಹಿಷ್ಕರಿಸಿ ತೆರಳಿದರು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಹೆಚ್.ಜಿ ಸರಸು, ಸದಸ್ಯರುಗಳಾದ ಚೇಂದ್ರಿಮಾಡ ಕಿಶನ್ ಕಾವೇರಪ್ಪ, ವೈ.ಕೆ ಅವ್ವಿ, ಮೂಕಚಂಡ ಪ್ರಸನ್ನ ಸುಬ್ಬಯ್ಯ, ಚಂಗೇಟಿರ ರಾಜ ಸೋಮಯ್ಯ, ನಾಯಡ ಬೋಪಣ್ಣ, ಕಂಜಿತAಡ ಸಂಧ್ಯಾ ಉತ್ತಪ್ಪ ಉಪಸ್ಥಿತರಿದ್ದರು.