ಮಡಿಕೇರಿ, ಏ. ೧೦: ಪಕ್ಷಿಗಳ ಕಲರವ ಯಾರಿಗೆ ತಾನೆ ಇಷ್ಟವಾಗದು... ಚಿತ್ರ... ವಿಚಿತ್ರ ಬಗೆಯ ದನಿಗಳು, ಇಂಪಾದ ಕೂಗು... ತಮ್ಮದೇ ಲೋಕದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳ ಆಟ-ನೋಟ-ಇಂಚರ ಎಲ್ಲವೂ ಚೆನ್ನ...

ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಮತ್ತು ಬಯಲು ಸೀಮೆಗಳ ನಡುವೆ ನೆಲೆಸಿದ್ದು ದಟ್ಟ ಕಾಡುಗಳು ಮತ್ತು ಹಲವಾರು ಪವಿತ್ರ ಮರಗಳ ತೋಪುಗಳಿಂದ ಸಮೃದ್ಧವಾಗಿರುವ ಪ್ರದೇಶ... ಇಲ್ಲಿ ೩೦೦ಕ್ಕೂ ಬಗೆಯ ಪಕ್ಷಿ ಸಂಕುಲವನ್ನು ಗುರುತಿಸಲಾಗಿದೆ. ವಿವಿಧ ಪ್ರಭೇದದ ಪಕ್ಷಿಗಳು ಕೊಡಗನ್ನು ತಮ್ಮ ತಾಣವನ್ನಾಗಿಸಿಕೊಂಡಿವೆ. ದೇಶದ ಪ್ರಮುಖ ಪಕ್ಷಿ ಪ್ರದೇಶಗಳಲ್ಲಿ ಒಂದಾಗಿರುವ ಈ ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮೂಲಕ ಆಯೋಜಿಸಲಾಗಿದ್ದ ೮ನೇ ಆವೃತ್ತಿಯ ಕರ್ನಾಟಕ ಹಕ್ಕಿ ಹಬ್ಬ ಮೂರು ದಿನಗಳ ಕಾಲ ನಡೆದಿದ್ದು, ಗಮನಾರ್ಹವಾಗಿತ್ತು.

ಕರ್ನಾಟಕ ೫೦೦ಕ್ಕೂ ಹೆಚ್ಚು ವಿವಿಧ ಪ್ರಭೇದದ ಪಕ್ಷಿಗಳಿಗೆ ನೆಲೆಯಾಗಿವೆ. ಈ ಬಗೆಯ ಜನರನ್ನು ಹೆಚ್ಚು ಸಂವೇದನಾಶೀಲಗೊಳಿಸುವ ಮೂಲಕ ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಮತ್ತು ಹುಲಿ ಕೇಂದ್ರಿತ ಪ್ರವಾಸೋದ್ಯಮದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ಏಳು ವರ್ಷಗಳಿಂದ ಈ ಹಕ್ಕಿ ಹಬ್ಬವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಇದೀಗ ಜಿಲ್ಲೆಯಲ್ಲಿ ನಡೆದದ್ದು ೮ನೇ ಹಕ್ಕಿ ಹಬ್ಬ... ಈ ಹಿಂದೆ ರಂಗನತಿಟ್ಟು ಪಕ್ಷಿಧಾಮ, ದಾಂಡೇಲಿ-ಅಣತಿ ಹುಲಿ ಸಂರಕ್ಷಿತ ಪ್ರದೇಶ, ಬಳ್ಳಾರಿ ದರೋಜಿ ಕರಡಿಧಾಮ ಪಿಲಿಕೊಳ ಮಂಗಳೂರು, ಹಳ್ಳದಕೇರಿ ಸಸ್ಸೋಧ್ಸಾನ ಬೀದರ್, ನಂದಿಬೆಟ್ಟ ಚಿಕ್ಕಬಳ್ಳಾಪುರ ಹಾಗೂ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಇಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗಿತ್ತು.

ಕಪ್ಪು ಜುಟ್ಟಿನ ಗಿಡುಗ ರಾಯಭಾರಿ

೮ನೇ ಹಕ್ಕಿ ಹಬ್ಬ ಮಡಿಕೇರಿಯಲ್ಲಿ ನಡೆದಿದ್ದು ರಾಯಭಾರಿಯಾಗಿ ಕಪ್ಪು ಜುಟ್ಟಿನ ಗಿಡುಗ (ಃಟಚಿಛಿಞ ಃಚಿzಚಿ) ಹದ್ದನ್ನು ಆಯ್ಕೆ ಮಾಡಲಾಗಿತ್ತು. ಇದು ಜಿಲ್ಲೆಗೆ ವಲಸೆ ಹಕ್ಕಿಯಾಗಿ ಭೇಟಿ ನೀಡುತ್ತದೆ.

ಆರಂಭದ ದಿನ ಉದ್ಘಾಟನಾ ಸಮಾರಂಭದೊAದಿಗೆ ಕಾರ್ಯಕ್ರಮದ ಕುರಿತಾಗಿ ಮಾಹಿತಿ ಒದಗಿಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ೮೦ ಮಂದಿ ಹಾಗೂ ಸ್ಥಳೀಯ ಕೆಲವರು, ಅರಣ್ಯ ಮಹಾವಿದ್ಯಾಲಯದ ಕೆಲ ಆಯ್ದ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊAಡು ಭಾಗಿಯಾಗಿದ್ದರು. ಅರಣ್ಯ ಕಾಲೇಜಿನ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಅವರು ಕೊಡಗಿನ ಪರಿಸರ, ಪಕ್ಷಿಸಂಕುಲದ ಮಹತ್ವ, ಹಿಂದಿನ ವೈಭವ, ಪ್ರಸ್ತುತದ ಸಮಸ್ಯೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ನಿನ್ನೆ ಹಾಗೂ ಇಂದು ವಿವಿಧ ತಂಡಗಳನ್ನು ರಚಿಸಿ ಬೆಳಿಗ್ಗೆ ಹಾಗೂ ಸಂಜೆ ಪಕ್ಷಿ ವೀಕ್ಷಣೆ ನಡೆಸಲಾಯಿತು. ತಾ. ೯ ರಂದು ಹಾಗೂ ೧೦ ವಿವಿಧ ಪರಿಣಿತರು ವಿಚಾರ ಸಂಕಿರಣದ ಮೂಲಕ ಈ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಅರಣ್ಯ ಹಾಗೂ ಖಾಸಗಿ ಜಾಗಗಳಲ್ಲಿ ಸೇರಿ ಸುಮಾರು ಏಳು ಕಡೆಗಳಲ್ಲಿ ಪಕ್ಷಿಗಳ ವೀಕ್ಷಣೆಯಲ್ಲಿ ಆಸಕ್ತರು ಭಾಗಿಗಳಾದರು. ಅರಣ್ಯ ಇಲಾಖೆಯ ತಂಡ-ಪರಿಸರ ತಜ್ಞರು ಸೇರಿ ೨೦ ಮಂದಿ ಪಕ್ಷಿ ಪ್ರಿಯರಿಗೆ ಸಹಕರಿಸಿದರು. ನಿಶಾನಿಬೆಟ್ಟ, ಕೋಳಿಗೂಡು ಜಂಕ್ಷನ್, ಬೊಟ್ಲಪ್ಪ ದೇವಾಲಯ ಮತ್ತಿತರ ಕಡೆಗಳಲ್ಲಿ ಜಾಗ ಗುರುತಿಸಲಾಗಿತ್ತು. ಕೆಲವು ಜಾಗದಲ್ಲಿ ೪೦ ರಿಂದ ೫೦, ಇನ್ನು ಕೆಲವೆಡೆ ೭೦ ರಿಂದ ೭೫ ರಷ್ಟು ಪ್ರಭೇದಗಳಂತೆ ನೂರಾರು ಪಕ್ಷಿಗಳ ವೀಕ್ಷಣೆಯೊಂದಿಗೆ ಇವುಗಳ ಪಟ್ಟಿಯನ್ನು ದಾಖಲು ಮಾಡಿಕೊಳ್ಳಲಾಯಿತು ಎಂದು ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ‘ಶಕ್ತಿ’ಗೆ ತಿಳಿಸಿದರು.

-ಶಶಿ