ಮಡಿಕೇರಿ, ಏ. ೧೦: ಕ್ರೀಡೆಯಲ್ಲಿ ಉತ್ತಮ ಸಾಧನೆಗಳ ಮೂಲಕ ಗಮನ ಸೆಳೆಯುತ್ತಿರುವ ಉದಯೋನ್ಮುಖ ತಾರೆ ಜಿಲ್ಲೆಯ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಸದ್ಯದಲ್ಲಿ ಫ್ರಾನ್ಸ್ನಲ್ಲಿ ನಡೆಯಲಿರುವ ಜೂನಿಯರ್ ವರ್ಲ್ಡ್ ಚಾಂಪಿಯನ್ ಶಿಪ್ -೨೦೨೨ ಹಾಗೂ ವರ್ಲ್ಡ್ ಸ್ಕೂಲ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್ನಲ್ಲಿ ಹರ್ಡಲ್ಸ್ನಲ್ಲಿ ಇವರು ದೇಶವನ್ನು ಪ್ರತಿನಿಧಿಸಲಿದ್ದಾರೆ. ಉನ್ನತಿ ಈ ಹಿಂದೆ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕ್ರೀಡಾತರಬೇತುದಾರರೂ ಆಗಿರುವ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ (ತಾಮನೆ - ಗುಡ್ಡಂಡ) ದಂಪತಿಯ ಪುತ್ರಿ. ಕಳೆದ ವರ್ಷ ಉನ್ನತಿ ಖ್ಯಾತ ಅಥ್ಲೇಟ್ ಪಿ.ಟಿ. ಉಷಾ ಅವರ ದಾಖಲೆಯೊಂದನ್ನು ಮುರಿದು ಗಮನ ಸೆಳೆದಿದ್ದಾರೆ.