ಮಡಿಕೇರಿ, ಏ. ೧೦: ನೇಕಾರರು ಒಗ್ಗೂಡುವಿಕೆಯಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಘಟನೆ ಮುಖ್ಯ ಎಂದು ರಾಜ್ಯ ನೇಕಾರರ ಸಂಘದ ನಿರ್ದೇಶಕ ಡಿ.ಕೆ. ತಿಮ್ಮಪ್ಪ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ನೇಕಾರರ ಒಕ್ಕೂಟ, ಇವರ ಆಶ್ರಯದಲ್ಲಿ ನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಕನ್ನಡ ಪ್ರಾಧ್ಯಾಪಕ ಬಿ.ಸಿ. ಶಂಕರಯ್ಯ ಮಾತನಾಡಿ, ದೇವರ ದಾಸಿಮಯ್ಯ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ನೇಕಾರರ ವೃತ್ತಿಯ ಜೊತೆಗೆ ಧಾರ್ಮಿಕ ದಾರ್ಶನಿಕವಾಗಿ ಸಮಾಜದ ಅಸಮಾನತೆ ತೊಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಚೌಡೇಶ್ವರಿ ದೇವಾಲಯದ ಸಮಿತಿ ಅಧ್ಯಕ್ಷರು ಗಜಾನನ ಅವರು ಮಾತನಾಡಿ ಸರ್ಕಾರದ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಕೈ ಜೋಡಿಸಿದಾಗ ಅದು ಸದುಪಯೋಗವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಅವರು ದಿನಕ್ಕೆ ಮಾತ್ರ ಜಯಂತಿ ಸೀಮಿತವಾಗದೆ ನಿರಂತರವಾಗಿರಲು ಶ್ರಮಿಸಿ ಎಂದರು. ರಾಜ್ಯ ದೇವಾಂಗ ಸಂಘದ ನಿರ್ದೇಶಕಿ ಭಾರತಿ ರಮೇಶ್ ಮಾತನಾಡಿದರು.
ಕುಶಾಲನಗರ ದೇವಾಂಗ ಸಂಘದ ಅಧ್ಯಕ್ಷ ವಿಜಯಕುಮಾರ್, ಮಡಿಕೇರಿ ತಾಲೂಕು ನೇಕಾರ ಒಕ್ಕೂಟದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಅವರು ಸ್ವಾಗತಿಸಿ, ನಿರೂಪಿಸಿದರು. ಭಾಗ್ಯ ಪ್ರಕಾಶ್ ವಂದಿಸಿದರು.