ಗೋಣಿಕೊಪ್ಪಲು, ಏ. ೮: ಗಿರಿಜನರ ಸಮಸ್ಯೆಗಳನ್ನು ಆಲಿಸಬೇಕಾದ ಅರಣ್ಯ ಸಚಿವರು ಗಿರಿಜನರನ್ನು ಮಾತನಾಡಿಸದೆ ತೆರಳಿರುವ ಬಗ್ಗೆ ಆದಿವಾಸಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಿರಸುಳಿ ಹಾಡಿಯಲ್ಲಿ ನಡೆದಿದೆ.

ಶುಕ್ರವಾರ ಜಿಲ್ಲೆಗೆ ಆಗಮಿಸಿದ ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿಯವರನ್ನು ಭೇಟಿ ಮಾಡುವ ಸಲುವಾಗಿ ತಿತಿಮತಿ ಸಮೀಪದ ಆಯಿರಸುಳಿ ಹಾಡಿಯ ಸಮೀಪ ನೂರಾರು ಸಂಖ್ಯೆಯಲ್ಲಿ ಗಿರಿಜನರು ಒಂದೆಡೆ ಸೇರಿದ್ದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ತಮ್ಮ ದೈನಂದಿನ ಕೂಲಿ ಕೆಲಸವನ್ನು ಬದಿಗೊತ್ತಿ ಮುಂಜಾನೆ ೮ ಗಂಟೆಯಿAದಲೇ ಜನರು ವಿವಿಧ ಹಾಡಿಯಿಂದ ಆಗಮಿಸಿ ಒಂದೆಡೆ ಸೇರಿದ್ದರು. ನಮ್ಮ ಸಮಸ್ಯೆ ಆಲಿಸಲು ಸಚಿವರು ಬರುತ್ತಾರೆ ಎಂದು ಆಸನ ಹಾಗೂ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಸಚಿವರು ಆಗಮಿಸದ ಹಿನ್ನೆಲೆ ಹಾಡಿಯ ಮುಖಂಡರುಗಳಾದ ಪಿ.ಸಿ. ರಾಮು, ಚುಬ್ರು, ಮಾಜಿ ಜಿ.ಪಂ. ಸದಸ್ಯೆ ಪಂಕಜ ಸೇರಿದಂತೆ ಅನೇಕ ಮುಖಂಡರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಹಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ, ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ವಿಚಾರವನ್ನು ಸಚಿವರ ಮುಂದೆ ಮಂಡಿಸಿ ನ್ಯಾಯ ದೊರಕಿಸಿಕೊಡಲು ಮನವಿ ಪತ್ರದೊಂದಿಗೆ ಆದಿವಾಸಿ ಮುಖಂಡರುಗಳು ಮುಂಜಾನೆಯಿAದಲೇ ತಮ್ಮ ಕೆಲಸವನ್ನು ಬದಿಗೊತ್ತಿ ಸಚಿವರಿಗಾಗಿ ಎದುರು ನೋಡುತ್ತಿದ್ದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸುತ್ತಮುತ್ತಲಿನ ರೈತರು ಆಯಿರಸುಳಿ ಬಳಿ ಜಮಾವಣೆಗೊಂಡಿದ್ದರು.

ಆದರೆ ಸಚಿವರು ಬಾಳೆಲೆ ಸಮೀಪದ ಸುಳುಗೋಡು ಬಳಿ ತೆರಳಿ ಅಲ್ಲಿಂದ ನೇರವಾಗಿ ಮಡಿಕೇರಿಯತ್ತ ಪ್ರಯಾಣ ಬೆಳೆಸಿದರು. ಈ ಸುದ್ದಿ ತಿಳಿದ ನೂರಾರು ಆದಿವಾಸಿಗಳು ಅಸಮಾಧಾನಗೊಂಡು ಸ್ಥಳದಿಂದ ಹೊರನಡೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ, ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ಎಂಎಲ್‌ಸಿ ಕೊಡಗು ಜಿಲ್ಲೆಗೆ ಅರಣ್ಯ ಸಚಿವರು ಖುದ್ದು ಭೇಟಿ ನೀಡಿ ಗಿರಿಜನರ ಸಮಸ್ಯೆಗಳನ್ನು ಆಲಿಸುವಂತೆ ಹಾಗೂ ಪರಿಹಾರ ಕಲ್ಪಿಸುವಂತೆ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆದಿದ್ದರು. ಈ ವೇಳೆ ಸಚಿವರು ಜಿಲ್ಲೆಗೆ ಆಗಮಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದೀಗ ಸಚಿವರು ಅವಶ್ಯವಾಗಿ ಭೇಟಿ ಆಗಬೇಕಾಗಿದ್ದ ಗಿರಿಜನರನ್ನು ಭೇಟಿ ಮಾಡದೆ ತೆರಳಿದ್ದಾರೆ. ಇದರಿಂದ ಸಹಜವಾಗಿ ಗಿರಿಜನರ ಮನಸ್ಸಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಕೃಷಿಕರ ಸಂಘದ ವೀರಾಜಪೇಟೆ ತಾಲೂಕು ಪ್ರಭಾರ ಅಧ್ಯಕ್ಷ ಪಿ.ಸಿ. ರಾಮು ಮಾತನಾಡಿ, ಆಯಿರಸುಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಗಿರಿಜನರನ್ನು ಸೇರಿಸಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಮನೆ ಕಟ್ಟಲು ಅರಣ್ಯ ಇಲಾಖಾ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಇವುಗಳ ಬಗ್ಗೆ ಸಚಿವರ ಗಮನ ಸೆಳೆಯಲು ಮನವಿ ಪತ್ರದೊಂದಿಗೆ ಕಾದು ಕುಳಿತ್ತಿದ್ದೇವೆ. ಆದರೆ ಸಚಿವರು ಇತ್ತ ಸುಳಿಯದೆ ಇರುವುದರಿಂದ ಇವರಿಗೆ ಗಿರಿಜನರ ಸಮಸ್ಯೆಯನ್ನು ಆಲಿಸುವ ಇಚ್ಚಾಶಕ್ತಿ ಇಲ್ಲವೆಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

-ಹೆಚ್.ಕೆ. ಜಗದೀಶ್