ಮಡಿಕೇರಿ, ಏ. ೯: ದೇಶಾದ್ಯಂತ ಕೋವಿಡ್ ಕಾರಣದಿಂದಾದ ಲಾಕ್ಡೌನ್ನಿಂದ ಆರ್ಥಿಕತೆ ಕುಸಿದಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. ವಿವಿಧ ಉದ್ಯಮಗಳು ನಷ್ಟ ಅನುಭವಿಸಿವೆ. ಇದರ ನಡುವೆಯೂ ಕೊಡಗಿನಲ್ಲಿ ನೂತನ ವಾಹನಗಳ ನೋಂದಾವಣಾ ಸಂಖ್ಯೆ ಏರಿಕೆಯನ್ನೇ ದಾಖಲಿಸಿದೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಮಾರ್ಚ್ ೩೧ ಕ್ಕೆ ಕೊನೆಗೊಂಡ ೨೦೨೧-೨೨ರ ಹಣಕಾಸು ವರ್ಷದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಶೇ. ೯೪.೬೫ ರಷ್ಟು ಗುರಿ ಸಾಧಿಸಿದೆ. ಈ ವರ್ಷದಲ್ಲಿ ಇಲಾಖೆಗೆ ಒಟ್ಟು ೫೩.೭೮ ಕೋಟಿ ರೂಪಾಯಿಗಳಷ್ಟು ಆದಾಯ ಬಂದಿದೆ. ೨೦೧೯-೨೦ ನೇ ಸಾಲಿನಲ್ಲಿ ಇಲಾಖೆ ಒಟ್ಟು ೪೭.೩೮ ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿ
ಶೇ. ೯೧.೫೧ ರಷ್ಟು ಗುರಿ ಸಾಧಿಸಿತ್ತು. ೨೦೨೦-೨೧ ನೇ ಸಾಲಿನಲ್ಲಿ ಶೇ. ೮೪.೩೭ ರಷ್ಟು ಗುರಿ ಸಾಧಿಸಿ ೪೩.೭೩ ಕೋಟಿ ರೂಪಾಯಿಗಳಷ್ಟು ವಾಹನ ತೆರಿಗೆ ಸಂಗ್ರಹ ಮಾಡಿದೆ.
ಇನ್ನು ವಾಹನಗಳ ಸಂಖ್ಯೆಯ ಬಗ್ಗೆ ನೋಡುವುದಾದರೆ ೨೦೧೯-೨೦ನೇ ಸಾಲಿನಲ್ಲಿ ಒಟ್ಟು ೬೦೭೬ ದ್ವಿಚಕ್ರ ವಾಹನಗಳು, ೧೮೦೫ ಕಾರುಗಳು, ೪೮೨ ಆಟೋ ರಿಕ್ಷಾಗಳು, ೩೭೪ ಸರಕು ಸಾಗಣೆ ವಾಹನಗಳು, ೭೦ ಟ್ರಾö್ಯಕ್ಟರ್ಗಳು, ೧೯ ಜೀಪುಗಳು ಸೇರಿದಂತೆ ಒಟ್ಟು ೯೧೧೦ ನೂತನ ವಾಹನಗಳು ನೋಂದಣಿ ಆಗಿದ್ದವು. ೨೦೨೦-೨೧ ನೇ ಸಾಲಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಕುಸಿತ ಆಗಿದ್ದು ಒಟ್ಟು ೪೯೬೦ ದ್ವಿಚಕ್ರ ವಾಹನಗಳು,
(ಮೊದಲ ಪುಟದಿಂದ) ೧೮೮೬ ಕಾರುಗಳು, ೧೩೫ ಆಟೋ ರಿಕ್ಷಾಗಳು, ೩೦೯ ಸರಕು ಸಾಗಾಟ ವಾಹನಗಳು ೬೮ ಟ್ರಾಕ್ಟರ್ಗಳು ಸೇರಿದಂತೆ ಒಟ್ಟು ೭೪೯೪ ವಾಹನಗಳು ನೋಂದಣಿ ಆಗಿವೆ.
ಕಳೆದ ಮಾರ್ಚ್ ೩೧ ಕ್ಕೆ ಕೊನೆಗೊಂಡ ೨೦೨೧-೨೨ ರ ಹಣಕಾಸು ವರ್ಷದಲ್ಲಿ ಒಟ್ಟು ೫೨೬೮ ದ್ವಿಚಕ್ರ ವಾಹನಗಳು , ೨೪೧೭ ಕಾರುಗಳು , ೧೩೩ ಆಟೋ ರಿಕ್ಷಾಗಳು, ೩೭೭ ಸರಕು ಸಾಗಾಟ ವಾಹನಗಳು ಮತ್ತು ೯೦ ಟ್ರಾಕ್ಟರ್ ಗಳೂ ಸೇರಿದಂತೆ ಒಟ್ಟು ೮೫೨೬ ವಾಹನಗಳು ನೋಂದಾವಣೆ ಆಗಿವೆ.
೨೦೨೦ ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಒಟ್ಟು ವಾಹನಗಳ ಸಂಖ್ಯೆ ೯೧೧೦ ಆಗಿದ್ದರೂ ಕಳೆದ ಹಣಕಾಸು ವರ್ಷದಲ್ಲಿ ೮೫೨೬ ವಾಹನಗಳು ನೋಂದಣಿ ಆಗಿದ್ದು ಕಳೆದ ವರ್ಷದ ಮೇ ಹಾಗೂ ಜೂನ್ ತಿಂಗಳಿನಲ್ಲಿ ಸರ್ಕಾರ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಎರಡು ತಿಂಗಳ ಕಾಲ ಯಾವುದೇ ವಾಹನ ನೋಂದಾವಣೆ ಆಗಿಲ್ಲ.
ಕೊಡಗು ಜಿಲ್ಲೆಯು ೬ ವರ್ಷಗಳ ಹಿಂದೆ ನೂತನ ವಾಹನ ನೋಂದಾವಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿತ್ತು.ಅಲ್ಲದೆ ಗುರಿ ಮೀರಿದ ಸಾಧನೆ ಮಾಡಿತ್ತು.
ಜಿಲ್ಲೆಯ ಜನರು ಕಾರು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ. ಮೂರು ವರ್ಷದ ಹಿಂದೆ ೧೮೦೫ ಹೊಸ ಕಾರುಗಳು ನೋಂದಣಿ ಆಗಿದ್ದರೆ ಕೋವಿಡ್ ನಡುವೆಯೂ ಕಳೆದ ವರ್ಷ ಈ ಸಂಖ್ಯೆ ಶೇಕಡಾ ೩೩ ಕ್ಕೂ ಹೆಚ್ಚು ಏರಿಕೆ ಆಗಿ ೨೪೧೭ ಹೊಸ ಕಾರುಗಳು ನೋಂದಣಿ ಆಗಿವೆ. ಈ ಹೊಸ ಕಾರುಗಳಲ್ಲಿ ೮೫ ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಬಿಎಂಡಬ್ಲ್ಯೂ ತಯಾರಿಕೆಯ ಹಲವು ಕಾರುಗಳೂ ಜಿಲ್ಲೆಯಲ್ಲಿ ನೋಂದಾಯಿಸಿವೆಯಾದರೂ ಇಲಾಖೆ ಬಳಿ ನಿಖರ ಮಾಹಿತಿ ಲಭ್ಯವಿಲ್ಲ.
ಜಿಲ್ಲೆಯಲ್ಲಿ ಈಗ ಒಟ್ಟು ೨,೧೧,೫೪೦ ವಾಹನಗಳಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ೨೦೧೧ ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ೫.೫೪ ಲಕ್ಷ. ಹತ್ತು ವರ್ಷಗಳಲ್ಲಿ ಕನಿಷ್ಟ ೬ ಲಕ್ಷ ಮೀರಿದೆ ಎಂದು ಇಟ್ಟುಕೊಂಡರೂ ಪ್ರತೀ ಮೂರು ಮಂದಿಗೆ ಒಂದು ವಾಹನ ಇದ್ದಂತಾಗಿದೆ.
-ಕೋವರ್ಕೊಲ್ಲಿ ಇಂದ್ರೇಶ್