ಮಡಿಕೇರಿ, ಏ. ೮: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಇವರ ಸಹಯೋಗದಲ್ಲಿ ಎಂ.ಎ. ಕೊಡವ ಸ್ನಾತಕೋತ್ತರ ಕಾರ್ಯಕ್ರಮ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಜಾನಪದ ಕಲಾವಿದ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಉದ್ಘಾಟಿಸಿದರು. ಎಂ.ಎ. ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.

ಯಾವುದೇ ದೇಶದ ನಾಗರಿಕತೆಯಾಗಲಿ, ಸಂಸ್ಕೃತಿ ಯಾಗಲಿ ಬೆಳೆಯಲು ಭಾಷೆ ಬಹಳ ಮುಖ್ಯ. ನಮ್ಮ ಭಾಷೆ ಬೆಳೆಯ ಬೇಕಾದರೆ ಮೊದಲು ಆ ಭಾಷೆಯ ಬಗ್ಗೆ ವ್ಯಾಮೋಹ ಇರಬೇಕು. ಕಲಿಯಲು ಹಾಗೂ ಬೇರೆಯವರಿಗೆ ಕಲಿಸುವ ಉತ್ಸಾಹ ಇರಬೇಕು. ಹೀಗಿದ್ದರೆ ಮಾತ್ರ ಕೊಡವ ಭಾಷೆ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದರು.

ಬಾಚರಣಿಯಂಡ ಪಿ. ಅಪ್ಪಣ್ಣ ಮಾತನಾಡಿ, ಈಗಾಗಲೇ ಅಳಿವಿನಂಚಿ ನಲ್ಲಿರುವ ಭಾಷೆಗಳಲ್ಲಿ ಕೊಡವ ಭಾಷೆಯೂ ಒಂದು ಎಂಬುದು ದುಃಖ ಉಂಟುಮಾಡುವ ವಿಷಯ ವಾಗಿದೆ. ಈಗ ಸೇರಿರುವ ಆ ೯ ಜನ ವಿದ್ಯಾರ್ಥಿಗಳಿಂದ ಇನ್ನು ಆಸಕ್ತಿ ಉಂಟಾಗಿ ೯೦೦ ವಿದ್ಯಾರ್ಥಿಗಳಾಗಲಿ ಎಂದು ಆಶಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಡಾ. ಮೇಜರ್ ರಾಘವ ಮಾತನಾಡಿ, ಕಾಲೇಜಿನಲ್ಲಿ ಮೊದಲ ಬಾರಿಗೆ ಎಂ.ಎ. ಕೊಡವ ಸ್ನಾತಕೋತ್ತರವು ಉದ್ಘಾಟನೆ ಯಾಗುತ್ತಿರುವುದು ಸಂತೋಷ ತಂದಿದೆ ಎಂದರು. ಅಜ್ಜಿನಿಕಂಡ ಮಹೇಶ್ ನಾಚಯ್ಯನವರು “ಕೊಡಗ್‌ರ ರಾಜಕೀಯ ಇತಿಹಾಸತ್‌ರ ಅವಲೋಕನ” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಎಂ.ಎ. ಕೊಡವ ಸ್ನಾತಕೋತ್ತರ ಮಾತ್ರವಲ್ಲದೆ ೧ನೇ ತರಗತಿ ಮಕ್ಕಳಿಗೆ ಕೊಡವ ಪಾಠ ಪುಸ್ತಕ ಹಾಗೂ ಪಿ.ಜಿ. ಡಿಪ್ಲೊಮಾ, ಪದವಿ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮವನ್ನು ತಯಾರಿಸಲಾಗಿದೆ. ಕೊಡವ ಭಾಷೆ ಯನ್ನು ೩ನೇ ಭಾಷೆಯನ್ನಾಗಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು. ಈಗ ಈ ಎಂ.ಎ. ಕೊಡವ ಸ್ನಾತಕೋತ್ತರಕ್ಕೆ ಆಸಕ್ತಿಯಿಂದ ವಿದ್ಯಾರ್ಥಿಗಳು ಸೇರಿರುವುದು ಬಹಳ ಸಂತೋಷದ ವಿಷಯವಾಗಿದೆ. ಇದು ಇಲ್ಲಿಗೆ ನಿಲ್ಲದೆ ಎಲ್ಲರು ಕಲಿಯುವಂತಾಗಬೇಕು ಎಂದು ಹೇಳಿದರು. ಕೊಡವ ಭಾಷೆಯಲ್ಲಿ ಎಂ.ಎ. ಕೊಡವ ಸ್ನಾತಕೋತ್ತರವು ಒಂದು ದೊಡ್ಡ ಮೈಲುಗಲ್ಲಾಗಿದೆ. ಈ ಕಾರ್ಯಕ್ರಮದ ಜೊತೆಗೆ ಬೊಳ್ಳೆರ ಸುಮನ್ ಸೀತಮ್ಮನವರು ಬರೆದಿರುವ ‘ನಡೆಕೋರ್ ತೂಡ್” ಹಾಗೂ ಬಚಮ್ಮಂಡ ಗೌರಮ್ಮ ಮಾದಮ್ಮಯ್ಯ ನವರು ಬರೆದಿರುವ ಕೊಡಗ್‌ಲ್ ಮಳೆರ ಅವಾಂತರ” ಎಂಬ ಈ ೨ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಇವರಿಬ್ಬರು ಈ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾಗಿರುವುದು ಸಂತಸದ ವಿಷಯವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾಚಿಮಾಡ ಜಾನಕಿ ಮಾಚಯ್ಯ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯರಾದ ಮಾಣಿಗೆರ ಶಂಬಯ್ಯ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ವಂದಿಸಿದರು. ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ನಿರೂಪಿಸಿದರು.