ಕೂಡಿಗೆ, ಏ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಹಾರಂಗಿ ಮುಖ್ಯ ನಾಲೆಗೆ ಬಿದ್ದಿದ್ದ ಜಿಂಕೆ ಮರಿಯನ್ನು ಸ್ಥಳೀಯ ಸೀತಾ ಕಾಲೋನಿ ಯುವಕರ ತಂಡ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಪ್ರಸಂಗ ನಡೆದಿದೆ.
ಸಮೀಪದ ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದ ಕಾಡು ನಾಯಿ (ಕೆನ್ನಾಯಿ)ಗಳು ಜಿಂಕೆ ಮರಿಯನ್ನು ಓಡಿಸಿಕೊಂಡು ಬಂದ ಹಿನ್ನೆಲೆಯಲ್ಲಿ ನಾಲೆಗೆ ಬಿದ್ದಿದೆ, ನಾಲೆಯಲ್ಲಿ ಈಗಾಗಲೇ ಮೂರು ಅಡಿಗಳಷ್ಟು ನೀರು ಹರಿಯುತ್ತಿದ್ದು, ನಾಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದುದನ್ನು ಗಮನಿಸಿದ ಸೀತಾ ಕಾಲೋನಿಯ ಯುವಕರು ನಾಲೆಗೆ ಇಳಿದು ಜಿಂಕೆಯನ್ನು ರಕ್ಷಣೆ ಮಾಡಿ ಹುದುಗೂರು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದರು. ನಂತರ ಜಿಂಕೆ ಮರಿಯನ್ನು ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಈ ಸಂದರ್ಭದಲ್ಲಿ ಸೀತಾ ಕಾಲೋನಿಯ ಅರುಣ, ರಘು, ರವಿ, ಉಮೇಶ್, ಅರಣ್ಯ ಇಲಾಖೆಯ ಮನುಕುಮಾರ್, ರತೀಶ್, ಬೀಮಣ್ಣ, ಇದ್ದರು.