ವೀರಾಜಪೇಟೆ, ಏ. ೮: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ರೂ. ೧ ಕೋಟಿ ೩೫ ಲಕ್ಷ ಅನುದಾನ ನೀಡಿರುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಬಳಿಯ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯ ಬ್ಯಾಂಕ್ ರೋಡ್ ಬಳಿಯ ಕಬ್ಬೆಬಾಣೆ ಕಾಲೋನಿಯಿಂದ ಭಗವತಿ ದೇವಸ್ಥಾನ ಲಿಂಕ್ ರಸ್ತೆಗೆ ರೂ. ೧೫ ಲಕ್ಷ ಅನುದಾನದಲ್ಲಿ ನೂತನ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಈ ರಸ್ತೆ ಮುಂದುವರಿಯಲು ಇನ್ನು ೧೦ ಲಕ್ಷ ಹೆಚ್ಚು ಅನುದಾನ ನೀಡಲಾಗಿದೆ. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭ ಗ್ರಾಮಸ್ಥರು ಗಮನ ಹರಿಸಬೇಕು. ಈಗಾಗಲೇ ಕೆಲವು ರಸ್ತೆಗಳ ಕಾಮಗಾರಿ ನಡೆದಿದ್ದು ಉಳಿದಿರುವ ಎಲ್ಲಾ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸ ಲಾಗುವುದು ಎಂದರು. ನಂತರ ಬಿಟ್ಟಂಗಾಲದ ಶ್ರೀ ಮುತ್ತಪ್ಪ ದೇವಸ್ಥಾನದ ಬಳಿ ರೂ. ೫ ಲಕ್ಷ ಅನುದಾನದ ನೂತನ ಕಾಂಕ್ರಿಟ್ ರಸ್ತೆ ಉದ್ಘಾಟಿಸಿದರು.

ಉದ್ಘಾಟನೆ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ರಮ್ಯ, ಸದಸ್ಯರಾದ ಬಿ.ಎನ್. ರಮೇಶ್ (ರತನ್) ನಾಣಮಂಡ ಪದ್ಮಾವತಿ, ಪಿ.ಆರ್. ಶಾರದ, ಮಾಜಿ ಸದಸ್ಯ ಎಂ.ಎA. ಬೋಪಯ್ಯ, ಪಿಡಿಓ ಸುರೇಶ್, ಶಕ್ತಿ ಕೇಂದ್ರದ ಕೆ. ಮಂದಣ್ಣ, ಗ್ರಾಮದ ಪಿ.ಆರ್. ದಾಮೋದರ್, ರಾಮಚ್ಚ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಶಿ ಸುಬ್ರಮಣಿ ಮತ್ತು ಎ. ಮಹೇಶ್, ಪಿ. ರಘು ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.