ಶನಿವಾರಸಂತೆ, ಏ. ೭: ಕಾರ್ಮಿಕ ಕಾರ್ಮಿಕನಾಗಿಯೇ ಉಳಿಯದೇ ಸರಕಾರದ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಂಡು ಬದುಕಿನಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.

ಪಟ್ಟಣದ ಕಾರ್ಮಿಕರ ಸಂಘದಲ್ಲಿ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಹಾಗೂ ಇತರ ಕೂಲಿ ಕಾರ್ಮಿಕರ ಸಂಘದ ಸಹಭಾಗಿತ್ವದಲ್ಲಿ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ನಡೆದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರಾಗಲೀ, ಅಧಿಕಾರಿ ಗಳಾಗಲೀ ಸಮಯಪ್ರಜ್ಞೆ ಬಹಳ ಮುಖ್ಯ. ಭಾರತದ ಸಂವಿಧಾನ ಉನ್ನತವಾಗಿದ್ದು, ಪ್ರತಿಯೊಬ್ಬರೂ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಬೇಕಿದೆ ಎಂದರು.

ತಾಲೂಕು ಕಾರ್ಮಿಕ ನಿರೀಕ್ಷಕಿ ಲೀನಾ ಮಾತನಾಡಿ, ಇಟ್ಟಿಗೆ ಮಾಡು ವವನಿಂದ ಆರಂಭಿಸಿ ನಿರ್ಮಿಸಿದ ಮನೆಯ ಕೀಕೊಟ್ಟು ಹೋಗುವ ಕೆಲಸಗಾರನೂ ಕಾರ್ಮಿಕನೇ. ೧೮-೬೦ ವರ್ಷದವರೆಗಿನ ಕಾರ್ಮಿಕರು ಕಾರ್ಮಿಕ ಸಂಘದ ಸದಸ್ಯರಾಗ ಬಹುದು. ಸರಕಾರದ ಯೋಜನೆಗಳ ಸದುಪಯೋಗದೊಂದಿಗೆ ಪಿಂಚಣಿ ಸೌಲಭ್ಯವನ್ನೂ ಪಡೆಯಬಹುದು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ಕಟ್ಟಡ ಕಟ್ಟುವ ಕೈಗಳಿಗೆ ಒತ್ತಾಸೆಬೇಕು. ಸರಕಾರಿ, ಖಾಸಗಿ ಸೌಧ ಕಟ್ಟುವ ಕಾರ್ಮಿಕರು ಸಂಘಟಿತರಾಗಿ ಜಾಗೃತರಾಗಬೇಕು. ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಅವಲಂಭಿತನಾಗಿದ್ದು, ಅಸಂಘಟಿತ ವಲಯ ನಿರ್ಲಕ್ಷö್ಯವಾಗಿದೆ. ಸಂಘಟಿತರಾಗಿ ಪಡೆಯುವ ಲೇಬರ್ ಕಾರ್ಡ್ ಉಪಯುಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ೧೧ ಹಿರಿಯ ಕಾರ್ಮಿಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜ, ಸದಸ್ಯರಾದ ಎಸ್.ಎನ್. ರಘು, ಸಿ.ಜೆ. ಗಿರೀಶ್, ಮಾಜಿ ಅಧ್ಯಕ್ಷ ಸಿ.ಬಿ. ಅಬ್ಬಾಸ್, ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿದರು. ಕಾರ್ಮಿಕರ ಸಂಘದ ಅಧ್ಯಕ್ಷ ವಿಠಲ್ ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪಂಚಾಯಿತಿ ಸದಸ್ಯೆ ಭವಾನಿ, ಉಪನ್ಯಾಸಕ ಸೋಮಶೇಖರ್ ಉಪಸ್ಥಿತರಿದ್ದರು.