ಗೋಣಿಕೊಪ್ಪಲು, ಏ. ೬: ಕಳೆದ ಒಂಬತ್ತು ದಿನಗಳಿಂದ ಹುಲಿ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಕಳೆದ ಮೂರು ದಿನಗಳಿಂದ ಹುಲಿಯ ಚಲನವಲನಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ.
ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳಾದ ಕುಟ್ಟಂದಿ, ಬಿ. ಶೆಟ್ಟಿಗೇರಿ ಹಾಗೂ ಕುಂದ ಗ್ರಾಮದ ಹಲವು ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ, ಆ ಮೂಲಕ ಹುಲಿಯ ಓಡಾಟದ ಬಗ್ಗೆ ಮಾಹಿತಿ ತಿಳಿಯಲು ಕಾರ್ಯಾಚರಣೆ ತಂಡ ಇದೀಗ ಪ್ರಯತ್ನ ನಡೆಸಿದೆ.
ಈ ಹಿಂದೆ ಹಲವು ಕಡೆಗಳಲ್ಲಿ ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ಕ್ಯಾಮರಾಗಳನ್ನು ಅಳವಡಿಸಿ ಕಾರ್ಯಾಚರಣೆ ಮಾಡಲಾಗಿತ್ತು ಆದರೆ ಕ್ಯಾಮರಾಕ್ಕೆ ಹುಲಿಯ ನಿಖರ ಚಿತ್ರ ಸೆರೆಯಾಗಿರಲಿಲ್ಲ.
ಬುಧವಾರ ವೇಳೆ ಬಿ. ಶೆಟ್ಟಿಗೇರಿ ಭಾಗದಲ್ಲಿ ಹುಲಿಯು ಅಲ್ಲಿನ ನಾಗರಿಕರಿಗೆ ದರ್ಶನವಾಗಿದೆ ಎಂಬ ಮಾಹಿತಿ ಲಭಿಸಿತ್ತು. ಇದರಿಂದಾಗಿ ನಾಗರಿಕರು ಸೂಚಿಸಿದ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿ ಹುಲಿಯ ಸಂಚಾರದ ಬಗ್ಗೆ ನಿಖರ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ಕುಂದ, ಬಿ. ಶೆಟ್ಟಿಗೇರಿ, ಬಿಟ್ಟಂಗಾಲ ಹಾಗೂ ಕುಟ್ಟಂದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸಿದ ಬಗ್ಗೆ ವರದಿ ಆಗಿಲ್ಲ.
ಸಾಕಾನೆಗಳಾದ ಶ್ರೀಕಂಠ ಮಹೇಂದ್ರ ಹಾಗೂ ಭೀಮಾ ಬುಧವಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಇಲಾಖೆಯ ಡಿಎಫ್‌ಓ ಚಕ್ರಪಾಣಿ, ಶಿವರಾಂ ಬಾಬು, ಎ.ಟಿ. ಪೂವಯ್ಯ, ಎಸಿಎಫ್ ಉತ್ತಪ್ಪ, ಆರ್.ಎಫ್.ಓ. ಅಶೋಕ್ ಹುನಗುಂದ, ದಿವಾಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿದ್ದಾರೆ.
- ಹೆಚ್.ಕೆ.ಜಗದೀಶ್