ಬೆಂಗಳೂರು, ಏ. ೬: ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಉಡುಪಿ, ರಾಮನಗರ, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ೨೦೨೨-೨೩ನೇ ಸಾಲಿನಿಂದ ೨೦೨೪-೨೫ನೇ ಸಾಲಿನವರೆಗಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ನೇ ಹಂತದ ಯೋಜನೆಯ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ಅವರ ಅಧ್ಯಕ್ಷತೆಯ ರಾಜ್ಯಮಟ್ಟದ ಸಮಿತಿ ಅನುಮೋದನೆ ನೀಡಿದೆ.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ-೪ನೇ ಹಂತದ ೩ನೇ ಸಮಿತಿ ಮತ್ತು ನಗರೋತ್ಥಾನ-೩ನೇ ಹಂತದ ಯೋಜನೆಗಳ ೧೮ನೇ ರಾಜ್ಯಮಟ್ಟದ ಸಮಿತಿಯ ಸಭೆ ವಿಧಾನ ಸೌಧದಲ್ಲಿ ಇಂದು ಸಚಿವ ಎಂ.ಟಿ.ಬಿ. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದರಿಂದಾಗಿ ೨೦೨೨-೨೩ನೇ ಸಾಲಿನಿಂದ ೨೦೨೪-೨೫ನೇ ಸಾಲಿನವರೆಗಿನ ೪ನೇ ಹಂತದ ಯೋಜನೆಯ ಈ ಕ್ರಿಯಾ ಯೋಜನೆಗಳಿಂದ ಮೈಸೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ೭೫ ಕೋಟಿ ರೂಪಾಯಿ, ಕೊಡಗು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ೫೫ ಕೋಟಿ ರೂಪಾಯಿ, ಬಳ್ಳಾರಿ -೮೦ ಕೋಟಿ ರೂಪಾಯಿ, ರಾಮನಗರ-೧೨೫ ಕೋಟಿ ರೂಪಾಯಿ, ದಾವಣಗೆರೆ-೭೦ ಕೋಟಿ ರೂಪಾಯಿ, ಬೆಳಗಾವಿ-೨೬೦ ಕೋಟಿ ರೂಪಾಯಿ ಹಾಗೂ ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ೪೦ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.

ರಾಜ್ಯದ ೩೦೨ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ನೇ ಹಂತದ ಯೋಜನೆಯಡಿ ೩೮೮೫ ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಅರ್ಚನಾ, ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.