ಸೋಮವಾರಪೇಟೆ, ಏ. ೬: ದೇಶದ ಸಚಿವರಾಗಿ, ಉಪ ಪ್ರಧಾನಿ ಯಾಗಿ ಸೇವೆ ಸಲ್ಲಿಸಿದ ಸಮಾಜ ಸುಧಾರಕ ಬಾಬುಜಗಜೀವನ್ ರಾಮ್ ಅವರ ಹೋರಾಟ ಹಾಗೂ ಜಾರಿಗೆ ತಂದ ಕಾಯ್ದೆಗಳು ಐತಿಹಾಸಿಕ ದಾಖಲೆಗಳಾಗಿವೆ ಎಂದು ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಬಣ್ಣಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಇಲ್ಲಿನ ಸ್ತಿçÃಶಕ್ತಿ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಬುಜಗಜೀವನ್ ರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಸುಧಾರಣೆ, ಹಸಿರು ಕ್ರಾಂತಿ ಹಾಗೂ ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಜಗಜೀವನ್ರಾಂ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಾರ್ಮಿಕರ ಶ್ರೇಯೋಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಕನಿಷ್ಟ ಕೂಲಿ ಕಾಯ್ದೆಯ ಮೂಲಕ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಮಹಾನ್ ಮಾನವತಾವಾದಿಯ ಜೀವನ ಚರಿತ್ರೆಯನ್ನು ಎಲ್ಲರೂ ಅರಿತುಕೊಂಡು ಅವರ ತತ್ವಾದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಜೆ.ಸಿ. ಶೇಖರ್ ಮಾತನಾಡಿ, ಸಮಾಜ ಸುಧಾರಣೆಗೆ ಶ್ರಮಿಸಿದ ದಾರ್ಶನಿಕರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಅವರುಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು. ಎಲ್ಲಾ ಸಂಸ್ಕೃತಿಗಳನ್ನು ಪ್ರೀತಿಸಿ ನಮ್ಮ ಸಂಸ್ಕೃತಿಯಲ್ಲಿ ಜೀವಿಸಬೇಕು. ಹಾಗಾದಾಗ ಮಾತ್ರ ಸುಖೀ ಸಮಾಜ ನಿರ್ಮಾಣ ಸಾಧ್ಯ ಎಂದ ಶೇಖರ್ ಅವರು, ಎಲ್ಲರಿಗೂ ಪ್ರೇರಣಾದಾಯಿಯಾಗಿ ಆಡಳಿತ ನಡೆಸಿದ ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸ್ತಿçà ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸುಮತಿ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಮುಖ್ಯಾಧಿಕಾರಿ ನಾಚಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಚಂದ್ರಪ್ಪ, ಬಾಲಕೃಷ್ಣ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.