ಸೋಮವಾರಪೇಟೆ, ಏ. ೫: ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ ೨ಎಗೆ ಸೇರಿಸಬೇಕೆಂಬ ಬೇಡಿಕೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಆದೇಶದಂತೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲು ರಾಜ್ಯ ಪ್ರವಾಸ ಕೈಗೊಂಡಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ತಂಡ ಜಿಲ್ಲೆಗೆ ಆಗಮಿಸಿ ಸಮುದಾಯದವರಿಂದ ವಿವರ ಬಯಸಿದ ಸಂದರ್ಭ ನಾವೆಲ್ಲಾ ವೀರಶೈವಲಿಂಗಾಯತರು, ಪಂಚಮಸಾಲಿಗಳು ಎಂಬುದು ಯಾರು ಎನ್ನುವುದೇ ಗೊತ್ತಿಲ್ಲ ಆದ್ದರಿಂದ ಮೀಸಲಾತಿ ನೀಡಿದರೆ ಎಲ್ಲಾ ವೀರಶೈವ ಲಿಂಗಾಯತರಿಗೂ ನೀಡಬೇಕು ಎಂದು ಆಗ್ರಹಿಸಿದರು.
ಸೋಮವಾರಪೇಟೆ ತಾಲೂಕಿನ ಕೂಗೆಕೋಡಿ ಹಾಗೂ ಕೊಡ್ಲಿಪೇಟೆಗೆ ತೆರಳಿದ ತಂಡ ಕೆಲವು ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರೆ ಮತ್ತೊಂದೆಡೆ ಸಾರ್ವಜನಿಕವಾಗಿ ಅಭಿಪ್ರಾಯ ಸಂಗ್ರಹಿಸಿತು.
ಜಿಲ್ಲೆಯಲ್ಲಿ ವೀರಶೈವಲಿಂಗಾಯತ ಬಿಟ್ಟರೆ ಬೇರೆ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದೇವೆ; ಆದರೆ ಕೆಲವರು ತಮ್ಮ ರಾಜಕೀಯಕ್ಕಾಗಿ ಸಮುದಾಯ ವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪಂಚಮಸಾಲಿಗಳೆನ್ನುವವರು ಕೊಡಗಿನಲ್ಲಿ ಇಲ್ಲ ಆದರೂ ಇದ್ದಾರೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮನ್ನು ಬಳಸಿಕೊಳ್ಳಬೇಡಿ. ಮೀಸಲಾತಿ ನೀಡುವುದಾದರೆ ಎಲ್ಲಾ ವೀರಶೈವಲಿಂಗಾಯತರಿಗೂ ನೀಡಿ ಅದು ಬಿಟ್ಟು ಸಮುದಾಯ ಒಡೆದು ಮೀಸಲಾತಿ ನೀಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಮಾತನಾಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರದ ಆದೇಶದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ವರದಿಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇವೆ, ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯರು ಮನೆಗಳಿಗೆ ತೆರಳಿ ಮಾಹಿತಿ ಕೇಳಿದ ಸಂದರ್ಭ ನಾವು ವೀರಶೈವ ಲಿಂಗಾಯತ ಎಂಬುದಾಗಿಯೇ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಆಯೋಗದ ಸದಸ್ಯರುಗಳಾದ ಕಲ್ಯಾಣಕುಮಾರ್, ರಾಜಶೇಖರ್,ಸುವರ್ಣ, ಅರುಣ್ ಕುಮಾರ್, ಶಾರದಾ ನಾಯಕ್, ದಯಾನಂದ, ಜಗದೀಶ್, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಾದ ಕವಿತಾ, ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿಂದುಸುದೀಪ್ , ಕೂಗೆಕೋಡಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್ ಗ್ರಾಮದ ಪ್ರಮುಖರುಗಳಾದ ಶಿವಣ್ಣ, ಕುಶವಂತ್, ಸೋಮಶೇಖರ್, ಶಿವನಂಜಪ್ಪ, ಚಂದ್ರಶೇಖರ್, ನಿರಂಜನ್, ವಿನಯ್, ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಜಿಲ್ಲಾದ್ಯಕ್ಷ ಎ.ಎಸ್.ಮಲ್ಲೇಶ್, ಕಾರ್ಯದರ್ಶಿ ಗಿರೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾರಾಣಿ, ಗೌರವಾಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಭಾಗವತಿ ದೇಶ್ಮುಖ್, ಕಾರ್ಯದರ್ಶಿ ಗೀತಾ ರಾಜು, ಸರಿತಾ, ತಾಲೂಕು ಘಟಕದ ಅಧ್ಯಕ್ಷ ಜಿ.ಬಿ.ಜಯರಾಜ್, ವೀರಶೈವ ಮಹಾಸಭಾದ ಯುವಘಟಕದ ತಾಲೂಕು ಅಧ್ಯಕ್ಷ ಆದರ್ಶ್ ಪದಾಧಿಕಾರಿಗಳಾದ ಪ್ರೇಮನಾಥ್, ಲಿಕಿತ್, ಜೀವನ್ ಮುಂತಾದವರು ಹಾಜರಿದ್ದರು.