ಮಡಿಕೇರಿ ಏ. ೬: ಪ್ರಸ್ತುತ ರಾಜ್ಯದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಲ್ಲಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಸೋಲುವ ಹತಾಶ ಮನೋಭಾವನೆಯಲ್ಲಿದೆ. ಇದೇ ಕಾರಣಕ್ಕೆ ಎಸ್‌ಡಿಪಿಐ ವಿರುದ್ಧ ಆರೋಪ ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಖಲೀಲ್ ಮಡಿಕೇರಿ ಆರೋಪಿಸಿದ್ದಾರೆ. ಬಿಜೆಪಿಯನ್ನು ಅಧಿಕ್ಕಾರಕ್ಕೇರಿಸಿದ್ದು ಕಾಂಗ್ರೆಸ್ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ೧೪ ಶಾಸಕರು ಮತ್ತು ಜೆಡಿಎಸ್‌ನ ಮೂವರು ಶಾಸಕರ ಬೆಂಬಲದಿAದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ ಎನ್ನುವುದನ್ನು ಡಿಸಿಸಿ ಅಧ್ಯಕ್ಷರು ಮರೆಯಬಾರದು ಎಂದು ಹೇಳಿದ್ದಾರೆ.

ಎಸ್‌ಡಿಪಿಐ ಪಕ್ಷ ಕೋಮು-ದ್ವೇಷ ಹರಡಿರುವ ಒಂದೇ ಒಂದು ಘಟನೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಹಿರಂಗಪಡಿಸಲಿ. ಇಡೀ ದೇಶದಲ್ಲಿ ಇದುವರೆಗೂ ಹಿಂದೂ ಧರ್ಮದ ವಿರುದ್ಧ ಎಸ್‌ಡಿಪಿಐ ಪಕ್ಷ ಒಂದೇ ಒಂದು ಹೇಳಿಕೆಯನ್ನು ಕೂಡ ನೀಡಿಲ್ಲ. ಇಂದು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಕೃತ್ಯಗಳ ವಿರುದ್ಧ ನೇರವಾಗಿ ಮಾತನಾಡಲು ಧೈರ್ಯ ಇಲ್ಲದ ಕಾಂಗ್ರೆಸ್ ವಿನಾಕಾರಣ ಎಸ್‌ಡಿಪಿಐ ಪಕ್ಷವನ್ನು ಎಳೆದು ತಂದಿದೆ ಎಂದು ಆರೋಪಿಸಿದ್ದಾರೆ.