ಮಡಿಕೇರಿ, ಏ. ೫: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಜ. ತಿಮ್ಮಯ್ಯ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ತಿಮ್ಮಯ್ಯ ಅವರ ಪ್ರತಿಮೆಗೆ ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ, ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ನಂತರ ಜನರಲ್ ತಿಮ್ಮಯ್ಯ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಫೀ.ಮಾ. ಕಾರ್ಯಪ್ಪ, ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕೆ.ಸಿ.ಸುಬ್ಬಯ್ಯ, ಚಲನಚಿತ್ರ ನಟ, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಆಗಮಿಸಿದ್ದರು.

ವೇದಿಕೆಯಲ್ಲಿ ಶಾಲಾ ಮಂಡಳಿಯ ಪ್ರಮುಖರಾದ ಸಿ.ಡಿ. ಕಾಳಪ್ಪ, ಕರೆಸ್ಪಾಂಡೆAಟ್ ಕೆ.ಟಿ. ಮುತ್ತಪ್ಪ, ಪ್ರಾಂಶುಪಾಲೆ ಸರಸ್ವತಿ ಬಿ.ಎಂ. ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಶಾಲೆಗೆ ಜನರಲ್ ತಿಮ್ಮಯ್ಯ ಅವರ ತೈಲ ವರ್ಣದ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ಅದನ್ನು ಕರ್ನಲ್ ಕೆ.ಸಿ. ಸುಬ್ಬಯ್ಯ ಅವರು ಅನಾವರಣ ಮಾಡಿದರು.

ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಡಾ. ಪಾರ್ವತಿ ಅಪ್ಪಯ್ಯ, ಚೌರೀರ ಕಾವೇರಿ ಪೂವಯ್ಯ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.