ಚೆಯ್ಯಂಡಾಣೆ, ಏ. ೫: ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿ ಕೆರೆ ಹಾನಿ ಮಾಡುತ್ತಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.

ಚೇಲಾವರ ಗ್ರಾಮದ ಪಿ. ಕುಟ್ಟಪ್ಪ, ಎಂ. ಬಿದ್ದಪ್ಪ, ತಮ್ಮಯ್ಯ ಎಂ.ಡಿ. ಅಪ್ಪಯ್ಯ ಮಿಟ್ಟು ಅವರ ತೋಟಗಳಿಗೆ ಹಾನಿಯಾಗಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಮಾಜಿ ಸೈನಿಕ ಎಂ. ರಮೇಶ್ ಅಪ್ಪಯ್ಯ ‘ಶಕ್ತಿ’ಗೆ ಮಾಹಿತಿ ನೀಡಿ ನಾವು ಹಲವಾರು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅರಣ್ಯಾಧಿಕಾರಿಗಳು ಸ್ಪಂದಿಸಿ ತೋಟಕ್ಕೆ ಭೇಟಿಕೊಟ್ಟು ಕಾಡಾನೆಗಳನ್ನು ಓಡಿಸುತ್ತಾರೆ ಆದರೆ ಮತ್ತೆ ಪುನಃ ಕಾಡಾನೆಗಳು ತೋಟಗಳಿಗೆ ಮರಳಿ ಬರುತ್ತಿವೆ. ಇದರಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಕೂಡಲೇ ಅರಣ್ಯ ಅಧಿಕಾರಿಗಳು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿದು ಮರಳಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.