ಮಡಿಕೇರಿ, ಏ. ೬: ಕೋವಿಡ್ ಸಂಕಷ್ಟದ ಕಾಲದಲ್ಲಿ ದುಡಿಸಿಕೊಂಡು ಇದೀಗ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿ ಅರೆ ವೈದ್ಯಕೀಯ ಸಿಬ್ಬಂದಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ನಗರದ ಗಾಂಧಿ ಮೈದಾನದಲ್ಲಿ ಸೇರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸಕ್ಕೆ ಮರು ನೇಮಕಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭ ಮಾಲ್ದಾರೆ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೌಶಿಕ್ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುವ ಸಂದರ್ಭ ಜಿಲ್ಲೆಯ ವಿವಿಧ ತಾಲೂಕುಗಳಿಗೆ ೪೫ ಮಂದಿ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲಾಗಿತ್ತು, ಆದರೆ, ಇದೀಗ ಮಾರ್ಚ್ ೩೧ಕ್ಕೆ ಏಕಾಏಕಿ ಕರ್ತವ್ಯದಿಂದ ತೆರವುಗೊಳಿಸಿ ಸರ್ಕಾರ ಅನ್ಯಾಯವೆಸಗಿದೆ ಎಂದು ಅಳಲು ತೋಡಿಕೊಂಡರು.
ಕರ್ತವ್ಯ ಸಮಯದಲ್ಲಿ ಚೆಕ್ ಪೋಸ್ಟ್ನಿಂದ ಹಿಡಿದು ವಿವಿಧ ವಿಭಾಗದಲ್ಲಿ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸಿದ್ದೇವೆ. ಸರ್ಕಾರ ಸೇವಾ ಭದ್ರತೆಯೊಂದಿಗೆ ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಬಿನ್ಸಿ ಮಾತನಾಡಿ, ಕೋವಿಡ್ ಸಮಯದಲ್ಲಿ ವೈಯಕ್ತಿಕ ಬದುಕು ಬಿಟ್ಟು ಕರ್ತವ್ಯ ನಿರ್ವಹಿಸಿದ್ದೇವೆ. ಕೋವಿಡ್ ಮುಗಿಯಿತು ಎಂದು ಏಕಾಏಕಿ ಕರ್ತವ್ಯದಿಂದ ತೆರವುಗೊಳಿಸಿದ್ದಾರೆ. ಇದು ಸರಿಯಲ್ಲ ಎಂದರು.
ಕೊರೊನಾ ವಾರಿಯರ್ಸ್ ಆಗಿ ದುಡಿದ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕಾರ್ಮಿಕ ಮುಖಂಡ ಪಿ.ಆರ್. ಭರತ್ ಹೇಳಿದರು. ಈ ವೇಳೆ ಪ್ರಮುಖರಾದ ರವಿರಾಜ್, ವಿಶ್ವಾಸ್, ಪೂಜಿತಾ, ಪ್ರಜ್ವಲ್ ಇತರರು ಇದ್ದರು.