ವೀರಾಜಪೇಟೆ, ಏ. ೪: ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ನೀಡಿದರೆ ವಾಯು ಮಾರ್ಗದಲ್ಲಿ ಕೆಲಸ ನಡೆಯುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ ರಮೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕು ಕಚೇರಿಯ ಮುಂಭಾಗದಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲ ಎಂದು ನಾಮಫಲಕ ಹಾಕಲಾಗಿದೆ. ರೈತರು ನೇರವಾಗಿ ಹೋದರೆ ಯಾವುದೇ ಕಡತಗಳು ವಿಲೇ ಆಗುವುದಿಲ್ಲ ದಲ್ಲಾಳಿಗಳ ಮೂಲಕ ಒಂದು ಸಾವಿರ ರೂ. ನೀಡಿದರೆ ವಾಯುಮಾರ್ಗದಲ್ಲಿ ಕಡತಗಳಿಗೆ ಸಹಿ ಆಗುತ್ತದೆ. ತಹಶೀಲ್ದಾರ್ ಯೋಗಾನಂದ್ ಅವರಿಗೆ ದೂರು ನೀಡಿದರೆ ಎಲ್ಲಾ ಸರಿಯಾಗಿದೆ ಎಂದು ಸಬೂಬು ಹೇಳುತ್ತಾರೆ. ಹಣ ಇರುವವರ ಕೆಲಸ ಬೇಗ ಆಗುತ್ತದೆ. ರೈತರ ಪಾಡೇನು ಎಂದು ಪ್ರಶ್ನಿಸಿದರು.

ಕೊಡಗು ಗುಡ್ಡಗಾಡು ಪ್ರದೇಶ. ಪ್ರತಿದಿನ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದೇವೆ. ಸರ್ಕಾರ ಜಿಲ್ಲೆಯನ್ನು ಸೀಮೆಎಣ್ಣೆ ಮುಕ್ತ ಜಿಲ್ಲೆಯನ್ನಾಗಿ ಮಾಡಿದೆ. ಸರ್ಕಾರದ ನಿಲುವನ್ನು ಬದಲಾಯಿಸಿ ಹಿಂದಿನAತೆ ಸೀಮೆಎಣ್ಣೆ ವಿತರಿಸುವಂತೆ ಆಗ್ರಹಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎ ಮಹಾದೇವ್ ಮಾತನಾಡಿ ೨೦೧೯ರಲ್ಲಿ ನಡೆದ ಜಲಪ್ರಳಯದಲ್ಲಿ ನದಿ ಪಾತ್ರದ ಜನರು ಮನೆ, ಮಠ, ಪಡಿತರ ಚೀಟಿ ಸೇರಿದಂತೆ ಎಲ್ಲವನ್ನು ಕಳೆದು ಕೊಂಡಿದ್ದಾರೆ. ಆಹಾರ ಇಲಾಖೆಯಲ್ಲಿ ಹೊಸದಾಗಿ ಪಡಿತರ ಚೀಟಿ ಮಾಡಿಸುವಾಗ ನೋಂದಾವಣಿ ಮಾಡಿಕೊಂಡು ಪೋಸ್ಟ್ಲ್ಲಿ ಕಾರ್ಡ್ ಬರುತ್ತದೆ. ಅರ್ಜೆಂಟ್ ಇದ್ದರೆ ಖಾಸಗಿ ಸೈಬರ್ ಸೆಂಟರ್‌ಗೆ ಹೋಗಿ ತೆಗೆದುಕೊಳ್ಳಿ ಎಂದು ಕಳುಹಿಸುತ್ತಾರೆ. ಕಾರ್ಡ್ ಪಡೆದುಕೊಳ್ಳಲು ೧೫೦ ರೂಗಳು, ಹೆಸರು ಸೇರ್ಪಡೆಗೆ ೧೫೦ರೂ ಒಟ್ಟು ೩೦೦ ರೂಗಳನ್ನು ನೀಡಬೇಕು. ಸರ್ಕಾರದ ಹೆಸರಿನಲ್ಲಿ ಖಾಸಗಿ ಸೈಬರ್‌ಸೆಂಟರ್‌ಗಳು ಹಗಲು ದರೋಡೆಗೆ ಇಳಿದಿವೆ. ಆಹಾರ ಇಲಾಖೆ ನಿರೀಕ್ಷಕರ ಅಣತಿಯಂತೆ ನಡೆಯುತ್ತಿದೆ. ಸರ್ವೆ ಇಲಾಖೆಗೆ ಜನ ಸಾಮಾನ್ಯರು ಹೋಗುವಂತಿಲ್ಲ. ಸರ್ವೆ ನಕಾಶೆ ಮಾಡಿ ಕೊಡಲು ಹಣ ನೀಡಿದರೂ ಮೀನಾ ಮೇಷ ಎಣಿಸುತ್ತಾರೆ. ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ಚಹಾ ಸೇವನೆಗೆ ತೆರಳಿ ಅಲ್ಲೇ ಕಾಲ ಕಳೆಯುತ್ತಾರೆ ಎಂದು ಆರೋಪಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎ.ಸಿ ಸಾಬು ಮಾತನಾಡಿ ಅರಸುನಗರದ ಕುಂಜ ಎಂಬವರಿಗೆ ವೃದ್ಧಾಪ್ಯ ವೇತನ ಇರುವುದರಿಂದ ಕಟ್ಟಡ ಕಾರ್ಮಿಕರ ಸಂಘದಲ್ಲಿ ಪಿಂಚಣಿ ದೊರೆಯುತ್ತಿಲ್ಲ. ವೃದ್ಧಾಪ್ಯ ವೇತನವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಅವರ ಕಡತ ವಿಲೇವಾರಿ ಆಗಿಲ್ಲ ಎಂದು ತಾಲೂಕು ಕಚೇರಿಯ ಕಾರ್ಯ ವೈಖರಿಯನ್ನು ವಿವರಿಸಿದರು.