ಮಡಿಕೇರಿ, ಏ. ೪: ಮಡಿಕೇರಿಯ ದೇವಾಲಯ ವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುವ ಮೂಲಕ ಬಾವೈಕ್ಯತೆಗೆ ಮಾದರಿಯಾಗಿದ್ದಾರೆ. ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಡಿಕೇರಿಗೆ ಕುಟುಂಬ ಸಮೇತ ಆಗಮಿಸಿದ್ದ ಹಾವೇರಿ ಮೂಲದ ರಜಿಯಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹೋದ ರರಂತೆ ಬದುಕು ನಡೆಸಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರ ಮೈಯಲ್ಲಿ ಹರಿಯುವುದು ಕೆಂಪು ರಕ್ತವೇ ಹೊರತು ಬೇರೆ ಅಲ್ಲ. ದೇಶದಲ್ಲಿ ಅನೇಕ ಧರ್ಮ, ಸಂಪ್ರದಾಯ, ಸಮುದಾಯ, ಭಾಷೆಗಳು ಇವೆ. ವಿವಿಧತೆಯಲ್ಲಿ ಏಕತೆ ಇರುವುದು ನಮ್ಮ ದೇಶದ ವಿಶೇಷ. ಕೆಲ ಭಿನ್ನತೆಗಳಿದ್ದರೂ ಎಲ್ಲರೂ ಕೂಡಿಕೊಂಡು ಒಟ್ಟಾಗಿ ಹೋಗುವುದು ಇಂದಿನ ದಿನಗಳಲ್ಲಿ ಅವಶ್ಯಕತೆಯಾಗಿದೆ ಎಂದರು.